ಸಾರಾಂಶ
ಸಮಸ್ಯೆ ಹೇಳಿಕೊಂಡು ಬರುವ ಜನರಿಗೆ ಬಾಯಿಗೆ ಬಂದಂತೆ ಮಾತನಾಡಿದರೆ ಅವರು ಎಲ್ಲಿಗೆ ಹೋಗಬೇಕು. ಅವರಿಗೆ ಮಾಹಿತಿ ಇಲ್ಲದ ಕಾರಣಕ್ಕೆ ನಿಮ್ಮ ಬಳಿ ಬಂದಿರುತ್ತಾರೆ. ಹಾಗಾಗಿ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಮುಂಡಗೋಡ: ಸಾರ್ವಜನಿಕರ ಅರ್ಜಿಗೆ ಸೂಕ್ತ ಸ್ಪಂದನೆಯೊಂದಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಧಿಕಾರಿಗಳು ಸಾರ್ವಜನಿಕರೊಂದಿಗೆ ಉತ್ತಮ ವರ್ತನೆಯಿಂದ ನಡೆದುಕೊಳ್ಳಬೇಕು ಶಾಸಕ ಶಿವರಾಮ ಹೆಬ್ಬಾರ ಸೂಚಿಸಿದರು.ಬುಧವಾರ ಪಟ್ಟಣದ ನಗರಸಭಾ ಭವನದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾರ್ವಜನಿಕರ ಅವಹವಾಲು ಸ್ವೀಕರಿಸಿ ಮಾತನಾಡಿದರು. ಸಮಸ್ಯೆ ಹೇಳಿಕೊಂಡು ಬರುವ ಜನರಿಗೆ ಬಾಯಿಗೆ ಬಂದಂತೆ ಮಾತನಾಡಿದರೆ ಅವರು ಎಲ್ಲಿಗೆ ಹೋಗಬೇಕು. ಅವರಿಗೆ ಮಾಹಿತಿ ಇಲ್ಲದ ಕಾರಣಕ್ಕೆ ನಿಮ್ಮ ಬಳಿ ಬಂದಿರುತ್ತಾರೆ. ಹಾಗಾಗಿ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.ಈ ಕಾರ್ಯಕ್ರಮ ಕೇವಲ ತೋರಿಕೆ ಮಾತ್ರವಲ್ಲ. ಸಲ್ಲಿಸಿದ ಅರ್ಜಿಗಳು ಸಂಬಂಧಪಟ್ಟ ಇಲಾಖೆಯ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ. ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪ್ರತಿ ಅರ್ಜಿಗೂ ಸೂಕ್ತವಾದ ನ್ಯಾಯ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ತಾಲೂಕಿನಲ್ಲಿ ೬೫೦ಕ್ಕೂ ಹೆಚ್ಚು ಜನ ವಾರ್ಸಾ ಮಾಡಿಕೊಂಡಿಲ್ಲ ಎಂಬ ಮಾಹಿತಿ ಇದ್ದು, ಈ ಬಗ್ಗೆ ಹಲವು ಬಾರಿ ಮನವರಿಕೆ ಮಾಡಿದರೂ ವಾರ್ಸಾ ಪ್ರಕ್ರಿಯೆ ಮಾಡಿಕೊಳ್ಳಲು ಜನರು ಮುಂದೆ ಬರದೆ ಇರುವುದು ಶೋಚನಿಯ. ಇದೇ ರೀತಿ ನಿಷ್ಕಾಳಜಿ ವಹಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಸವಲತ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ವಾರ್ಸಾ ಮಾಡಿಕೊಳ್ಳದವರು ತಕ್ಷಣ ಮಾಡಿಕೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.ಕಳೆದ ಬಾರಿ ಮುಂಡಗೋಡ ತಾಲೂಕಿನಲ್ಲಿ ಶೇ. ೯೦ರಷ್ಟು ಬೆಳೆಹಾನಿಯಾಗಿದೆ. ಅದೇ ರೀತಿ ಪರಿಹಾರ ಮತ್ತು ಬೆಳೆವಿಮೆ ಬಂದರೂ ಕೆಲವರಿಗೆ ಈವರೆಗೂ ವಿತರಿಸಿಲ್ಲ ಎಂಬ ದೂರುಗಳಿವೆ. ಮಾಹಿತಿ ಪಡೆದು ಪರಿಹಾರ ಒದಗಿಸಿಕೊಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅನಧಿಕೃತ ಮದ್ಯ: ಪಟ್ಟಣದ ಆನಂದನಗರ ಬಡಾವಣೆಯಲ್ಲಿ ದೇವಾಲಯ, ಶಾಲೆ ಇರುವ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಮಕ್ಕಳು, ಮಹಿಳೆಯರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ತಕ್ಷಣ ಮದ್ಯ ಮಾರಾಟ ಮಾಡುವುದನ್ನು ತಡೆಯುವಂತೆ ಮಹಿಳೆಯರು ಮನವಿ ಸಲ್ಲಿಸಿದರು. ತಕ್ಷಣ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಶಾಸಕ ಶಿವರಾಮ ಹೆಬ್ಬಾರ ಸೂಚಿಸಿದರು. ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಸಹಾಯಕ ಅರಣ್ಯಾಧಿಕಾರಿ ರವಿ ಹುಲಕೋಟಿ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಪ್ರದೀಪ ಭಟ್, ತೋಟಗಾರಿಕೆ ಇಲಾಖೆ ಅಧಿಕಾರಿ ಕೃಷ್ಣ ಕುಳ್ಳುರ, ಪಿಎಸ್‌ಐ ಪರಶುರಾಮ ಮಿರ್ಜಗಿ, ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ, ವಾಗೀಶ ಬಾಚಿನಕೊಪ್ಪ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಹಾದೇವಪ್ಪ, ಪಪಂ ಸದಸ್ಯ ರಝಾ ಪಠಾಣ, ಮಹ್ಮದಗೌಸ ಮಖಾನದಾರ ಮುಂತಾದವರು ಉಪಸ್ಥಿತರಿದ್ದರು.