ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಬುಧವಾರ ಗದಗ ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ವಿಜಯಕುಮಾರ ಬಿರಾದಾರ ಅವರು ಲಕ್ಷ್ಮೇಶ್ವರ ತಾಲೂಕು ಸಾರ್ವಜನಿಕ ಕುಂದು-ಕೊರತೆ ಅಹವಾಲು ಸ್ವೀಕರಿಸಿದರು.
ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮುಖ್ಯಸ್ಥರಿಂದ ಮಾಹಿತಿ ಪಡೆದ ವಿಜಯ ಬಿರಾದಾರ, ಸಾರ್ವಜನಿಕರು ಸಮಸ್ಯೆಗಳನ್ನು ಎತ್ತಿಕೊಂಡು ನಿಮ್ಮಲ್ಲಿಗೆ ಬಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ, ಸಮರ್ಪಕ ಉತ್ತರ ನೀಡಿ ಹಾಗೂ ಸ್ವೀಕೃತಿ ಪ್ರತಿ ನೀಡಿ ಎಂದು ಸೂಚನೆ ನೀಡಿದರು.ಅಂಗವಿಕಲರ ಗುರುತಿನ ಚೀಟಿಯನ್ನು ಅರ್ಹ ಪಲಾನುಭವಿಗೆ ನೀಡಬೇಕು. ಬೇಕಾದವರಿಗೆಲ್ಲ ಕಣ್ಣು ಮುಚ್ಚಿ ಗುರುತಿನ ಚೀಟಿ ನೀಡುವುದರಿಂದ ಸಮಸ್ಯೆಗಳಿಗೆ ನೀವೆ ಹಾದಿ ಮಾಡಿಕೊಟ್ಟಂತಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಸುಭಾಷ್ ದಾಯಗೊಂಡ ಅವರಿಗೆ ಹೇಳಿದರು. ರೈತರ ಕೊಳವೆಬಾವಿ ವಿದ್ಯುತ್ ಸಂಪರ್ಕಕ್ಕೆ ಆರ್.ಆರ್. ನಂಬರ್ ನೀಡಿದ್ದೀರಾ, ರೈತರಿಂದ ಎಷ್ಟು ಶುಲ್ಕ ತುಂಬಿಸಿಕೊಳ್ಳುತ್ತಿದ್ದೀರಿ? ರೈತರು ಕಚೇರಿಗೆ ಎಡತಾಕದಂತೆ ಸಂಬಂಧಪಟ್ಟ ದಾಖಲೆಗಳೊಂದಿಗೆ ನಿಗದಿತ ಶುಲ್ಕ ಭರಿಸಿಕೊಂಡು ಅನುಕೂಲ ಮಾಡಿಕೊಡಿ ಎಂದು ಹೆಸ್ಕಾಂ ಅಧಿಕಾರಿ ಅಂಜನಪ್ಪ ಅವರಿಗೆ ಸೂಚಿಸಿದರು.
"ಬಲಿಗಾಗಿ ಕಾಯುತ್ತಿರುವ ಬಾಲೆಹೊಸೂರ ರಸ್ತೆ " ಎಂಬ ಶೀರ್ಷಿಕೆಯಡಿ ''''ಕನ್ನಡಪ್ರಭ'''' ಮಂಗಳವಾರ ಪ್ರಕಟಿಸಿದ ವರದಿಯ ಕಟ್ಟಿಂಗ್ಸ್ ಹಿಡಿದು ಲೋಕಾಯುಕ್ತರಿಗೆ ದೂರು ನೀಡಿದ ಸಾರ್ವಜನಿಕರು, ಕಳೆದ ಹತ್ತು ವರ್ಷಗಳಲ್ಲಿ ಬಾಲೆಹೊಸೂರಿನ ರಸ್ತೆಗೆ ಕೋಟ್ಯಂತರ ರು. ಖರ್ಚು ಹಾಕಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ತಿಂದು ಹಾಕಿದ್ದಾರೆ. ಆದರೂ ಈ ರಸ್ತೆಗೆ ಹಿಡಿ ಮಣ್ಣು ಹಾಕಿಲ್ಲವೆಂದು ಆರೋಪಿಸಿದರು.ಪಟ್ಟಣದಲ್ಲಿ ಚರಂಡಿ, ಕುಡಿಯುವ ನೀರು, ಆಶ್ರಯ ನಿವೇಶನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ದೂರಿನ ಸುರಿಮಳೆಯನ್ನೇ ಮಾಡಿದರು. ಪಟ್ಟಣದ 15ನೇ ವಾರ್ಡಿನ ಗೋಸಾವಿ ಜನಾಂಗ ವಾಸುತ್ತಿರುವ ಪ್ರದೇಶದಲ್ಲಿ ಅನೇಕ ಬಾರಿ ಸೌಲಭ್ಯ ಕಲ್ಪಿಸುವಂತೆ ಮನವಿ ಕೊಟ್ಟರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು. ಆಗ ಲೋಕಾಯುಕ್ತ ಅಧಿಕಾರಿ ವಿಜಯಕುಮಾರ ಬಿರಾದಾರ ಅವರು ಸಿಡಿಮಿಡಿಗೊಂಡು ಪುರಸಭೆಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಅವರಿಗೆ ಖಡಕ್ ಸೂಚನೆ ನೀಡಿ, 15 ದಿನದಲ್ಲಿ ಸಮಸ್ಯೆಗೆ ಪರಿಹಾರ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಂಜುನಾಥ ಮಾಗಡಿ ಹಾಗೂ ನಾಗರಾಜ ಚಿಂಚಲಿ ಮನವಿ ಸಲ್ಲಿಸಿ, ಪಟ್ಟಣದ ಬಡವರಿಗಾಗಿ ಗುರುತಿಸಲ್ಪಟ್ಟಿರುವ ಆಶ್ರಯ ನಿವೇಶ ಹಂಚಿಕೆಯಲ್ಲಿ ಸೂಕ್ತ ಫಲಾನುಭವಿಗಳಿಗೆ ನಿವೇಶನ ಸಿಕ್ಕಿಲ್ಲ, ಗುರುತಿಸಲ್ಪಟ್ಟಿರುವ ನಿವೇಶನದಲ್ಲಿ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಆಗಿಲ್ಲ ಎಂದು ದೂರಿದರು. ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಮೇವುಂಡಿಯಿಂದ ಪಟ್ಟಣಕ್ಕೆ ಪೂರೈಸುವ ತುಂಗಭದ್ರಾ ನದಿ ನೀರು ರಾಡಿಯಾಗಿದ್ದು, ನೀರು ಫಿಲ್ಟರ್ ಆಗುತ್ತಿಲ್ಲ ಎಂದು ದೂರಿದರು.ವಿಜಯಕುಮಾರ್ ಬಿರಾದಾರ ಅವರು ಆರೋಗ್ಯ ನಿರೀಕ್ಷಕ ಮುದಗಲ್ ಅವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿ, ನಿಮಗೆ ಕಾರ್ಯನಿರ್ಹಿಸಲು ಆಗುತ್ತದೆಯೋ ಇಲ್ಲವೋ ಎಂದು ಗದರಿ, ನಾವೇ ಫೀಲ್ಡಿಗಿಳಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ಇದ್ದರು.