ಸ್ವಾವಲಂಬಿ ಜೀವನಕ್ಕಾಗಿ ಶಿಕ್ಷಣವಂತರಾಗಿ

| Published : May 24 2025, 12:56 AM IST

ಸಾರಾಂಶ

ಪ್ರತಿಭಾವಂತ ಮಕ್ಕಳ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿದ್ದು, ಕೀಳರಿಮೆ ಬದಿಗಿಟ್ಟು ಶ್ರಮವಹಿಸಬೇಕು. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ. ಮಕ್ಕಳು ಈಗಿನಿಂದಲೇ ಉನ್ನತ ಕನಸು ಕಾಣುವ, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಬೇಕಾದ ಎಲ್ಲ ಪ್ರಯತ್ನಗಳನ್ನು ಶ್ರದ್ಧೆಯಿಂದ ಕಲಿತುಕೊಳ್ಳಬೇಕು.

ಕುಷ್ಟಗಿ:

ಸ್ವಾವಲಂಬಿ ಜೀವನಕ್ಕಾಗಿ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಸಾಧನೆ ಹಾದಿ ಸುಗಮಗೊಳಿಸಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಪಟ್ಟಣದಲ್ಲಿ ಹಾಲುಮತ ಸಮಾಜ ವತಿಯಿಂದ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ಸದುಪಯೋಗ ಪಡೆದುಕೊಂಡು ಉನ್ನತ ಮಟ್ಟದ ಶಿಕ್ಷಣ ಪಡೆದು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪ್ರತಿಭಾವಂತ ಮಕ್ಕಳ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿದ್ದು, ಕೀಳರಿಮೆ ಬದಿಗಿಟ್ಟು ಶ್ರಮವಹಿಸಬೇಕು. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ. ಮಕ್ಕಳು ಈಗಿನಿಂದಲೇ ಉನ್ನತ ಕನಸು ಕಾಣುವ, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಬೇಕಾದ ಎಲ್ಲ ಪ್ರಯತ್ನಗಳನ್ನು ಶ್ರದ್ಧೆಯಿಂದ ಕಲಿತುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಾದಿಮನಾಳ ಶಾಖಾ ಮಠದ ಶಿವಸಿದ್ದೇಶ್ವರಶ್ರೀ, ಶರಣು ತಳ್ಳಿಕೇರಿ, ಇನ್‌ಸೈಟ್ ಐಎಎಸ್ ಇನ್‌ಸ್ಟಿಟ್ಯೂಟ್‌ ಸಂಸ್ಥಾಪಕ ಜಿ.ಬಿ. ವಿನಯಕುಮಾರ, ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಫಕೀರಪ್ಪ ಚಳಗೇರಿ ಹಾಗೂ ಕನಕ ನೌಕರರ ಸಂಘದ ಪದಾಧಿಕಾರಿಗಳು, ಸಮಾಜದ ಹಿರಿಯರು ಭಾಗವಹಿಸಿದ್ದರು.