ಕನ್ನಡಪ್ರಭ ವಾರ್ತೆ ಕೋಲಾರಮುಂಗಾರು ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಬೇಕು. ವಿಪತ್ತು ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯತೋರಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯಲ್ಲಿ ಮುಂಗಾರು ಹಂಗಾಮಿಗೆ ಕೈಗೊಳ್ಳಬೇಕಾದ ಸಿದ್ಧತೆಗಳು, ಕುಡಿಯುವ ನೀರಿನ ನಿರ್ವಹಣೆ, ಮಳೆ ಹಾನಿ ಪರಿಹಾರ ಹಾಗೂ ಕೃಷಿ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.ಜಿಲ್ಲೆಯಲ್ಲಿ ಮಳೆಯ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಏಪ್ರಿಲ್ ತಿಂಗಳಲ್ಲಿ ಶೇ.೭೬ ರಷ್ಟು ಮಳೆ ಕೊರತೆಯಾಗಿತ್ತು. ಮೇ ತಿಂಗಳಲ್ಲಿ ವಾಡಿಕೆಯಂತೆ ೫೦.೧ ಮಿ.ಮೀ. ಮಳೆಯಾಗಬೇಕಿತ್ತು, ಆದರೆ ೪೭.೩ ಮಿ.ಮೀ. ಮಳೆಯಾಗಿದ್ದು ಶೇ.೬ ರಷ್ಟು ಕೊರತೆಯಾಗಿದೆ ಎಂದು ಅವರು ತಿಳಿಸಿದರು.ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಂಭವಿಸಿದ ಅನಾಹುತಗಳ ಬಗ್ಗೆ ಚರ್ಚಿಸಿದ ಅವರು, ಮಳೆಯಿಂದಾಗಿ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ತಲಾ ೫ ಲಕ್ಷ ರು. ಹಾಗೂ ೨ ಜಾನುವಾರುಗಳ ಸಾವಿಗೆ ತಲಾ ೩೦ ಸಾವಿರ ರು. ಪರಿಹಾರ ವಿತರಿಸಲಾಗಿದೆ. ಅಲ್ಲದೆ, ಭಾಗಶಃ ಹಾನಿಗೀಡಾದ ೫ ಮನೆಗಳಿಗೆ ತಲಾ ೫,೨೦೦ ರು. ಪರಿಹಾರ ನೀಡಲಾಗಿದೆ. ಮಳೆಯಿಂದಾಗಿ ೩೧ ವಿದ್ಯುತ್ ಕಂಬಗಳು ಹಾಗೂ ೨ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ತಕ್ಷಣವೇ ದುರಸ್ತಿ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು ೯೦೨ ಹೆಕ್ಟೇರ್ ತೋಟಗಾರಿಕಾ ಬೆಳೆ ಮತ್ತು ೫೩೮ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಈ ಕುರಿತು ಜಂಟಿ ಸಮೀಕ್ಷೆ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಹಾನಿ ವರದಿ ಪರಿಹಾರ ತಂತ್ರಾಂಶದಲ್ಲಿ ಶೀಘ್ರವಾಗಿ ಡೇಟಾ ಎಂಟ್ರಿ ಮಾಡಬೇಕು. ಇದರಿಂದ ರೈತರಿಗೆ ತ್ವರಿತವಾಗಿ ಪರಿಹಾರ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಾಕೀತು ಮಾಡಿದರು.
ನೀರಿನ ಸಮಸ್ಯೆ: ಬೇಸಿಗೆ ಹಾಗೂ ಮುಂಗಾರು ಪೂರ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಕೋಲಾರ ನಗರದ ೯ ವಾರ್ಡ್‌ಗಳು ಮತ್ತು ಮಾಲೂರು ಪಟ್ಟಣದ ೪ ವಾರ್ಡ್‌ಗಳಲ್ಲಿರುವ ನೀರಿನ ಸಮಸ್ಯೆ ತಕ್ಷಣವೇ ಬಗೆಹರಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ಕೇವಲ ತುರ್ತು ಸಂದರ್ಭಗಳಿಗೆ ಸೀಮಿತಗೊಳಿಸಿ, ಹೊಸ ಕೊಳವೆಬಾವಿಗಳನ್ನು ಕೊರೆಯಿಸುವುದು ಅಥವಾ ಪೈಪ್‌ಲೈನ್ ವಿಸ್ತರಣೆ ಮಾಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕಾಗಿ ಟಾಸ್ಕ್ ಫೋರ್ಸ್ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು.ಜಿಲ್ಲೆಯಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡಬೇಕು ಮತ್ತು ಕೆಟ್ಟು ನಿಂತಿರುವ ಘಟಕಗಳನ್ನು ತಕ್ಷಣವೇ ದುರಸ್ತಿಗೊಳಿಸಬೇಕು. ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಆಯಾ ಭಾಗದ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.ನಕಲಿ ಬೀಜದ ಬಗ್ಗೆ ಎಚ್ಚರ: ಮುಂಗಾರು ಬಿತ್ತನೆಗೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಕೃಷಿ ಇಲಾಖೆ ಜವಾಬ್ದಾರಿಯಾಗಿದೆ. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯವಿರುವಷ್ಟು ಬಿತ್ತನೆ ಬೀಜಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಳ್ಳಬೇಕು. ಎಲ್ಲೆಡೆ ನಕಲಿ ಬಿತ್ತನೆ ಬೀಜಗಳ ಮಾರಾಟ ಜಾಲದ ಮೇಲೆ ಹದ್ದಿನ ಕಣ್ಣಿಡಬೇಕು ಮತ್ತು ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕುವ ಕಾರ್ಯವು ಶೇ. ೮೫ರಷ್ಟು ಮುಗಿದಿದೆ. ಉಳಿದ ಶೇ. ೧೫ರಷ್ಟು ಲಸಿಕಾ ಕಾರ್ಯ ಅಭಿಯಾನದ ಮಾದರಿಯಲ್ಲಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಲಂಪಿ ಸ್ಕಿನ್ ಕಾಯಿಲೆಗೆ ಈಗಾಗಲೇ ಶೇ.೧೦೦ರಷ್ಟು ಲಸಿಕೆ ಹಾಕಲಾಗಿದ್ದು, ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.
ವಿಪತ್ತು ನಿರ್ವಹಣೆ ಎಂಬುದು ಕೇವಲ ಒಂದು ಇಲಾಖೆಗೆ ಸೀಮಿತವಾದದ್ದಲ್ಲ, ಇದು ಎಲ್ಲ ಇಲಾಖೆಯ ಅಧಿಕಾರಿಗಳ ಸಾಮೂಹಿಕ ಜವಾಬ್ದಾರಿ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಸ್ಪಂದಿಸಬೇಕು. ಕರ್ತವ್ಯಲೋಪ ಎಸಗುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಲ್ಲಾ ಹಿರಿಯ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಸಭೆಯಲ್ಲಿ ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಎಸ್.ಎಂ. ಮಂಗಳ, ಎಸಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಕೃಷಿ ಜಂಟಿ ನಿರ್ದೇಶಕಿ ಜಾವೇದಾ ಖಾನಮ್, ಗ್ರಾಮೀಣಾಭಿವೃದ್ಧಿ ಇಲಾಖೆ ಅಭಿಯಂತರ ರಘು, ಜಿಲ್ಲಾ ಭೂ ವಿಜ್ಞಾನ ಅಧಿಕಾರಿ ತಿಪ್ಪೇಸ್ವಾಮಿ ಇದ್ದರು.
------೨೬ಕೆಎಲ್‌ಆರ್-೫
ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಡಿಸಿ ಡಾ.ಎಂ.ಆರ್.ರವಿ ಮಾತನಾಡಿದರು.