ಸಾರಾಂಶ
ರಾಣಿಬೆನ್ನೂರು: ಹೆಗಲ ಮೇಲೆ ಕಂಬಳಿ ಹೊದ್ದುಕೊಂಡ ಮೇಲೆ ಪ್ರಾಮಾಣಿಕರಾಗಿ ಇರಬೇಕು. ನಾನು ಸಿಎಂ ಇದ್ದಾಗ ಕುರಿಗಾರರ ಸಂಘಗಳ ಮೂಲಕ ಕುರಿ ಖರೀದಿಗೆ ಎಂಟು ಲಕ್ಷ ರು. ಕೊಡುವ ೨೬೦ ಕೋಟಿ ರು.ಗಳ ಯೋಜನೆ ಮಾಡಿದ್ದೆ. ಕಾಂಗ್ರೆಸ್ ಸರ್ಕಾರ ಬಂದು ಅದನ್ನು ನಿಲ್ಲಿಸಿದೆ ಎಂದು ಮಾಜಿ ಸಿಎಂ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ತಾಲೂಕಿನ ಹಲಗೇರಿ, ತುಮ್ಮಿನಕಟ್ಟಿ, ಇಟಗಿ, ಮೇಡ್ಲೇರಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಕುರಿಗಾರರ ಅನುಕೂಲಕ್ಕಾಗಿ ಮಾಡಿದ ಯೋಜನೆಯನ್ನು ಈ ಸರ್ಕಾರ ನಿಲ್ಲಿಸಿದೆ. ಆ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸದಿದ್ದರೆ ನಾನು ಕೇಂದ್ರ ಸರ್ಕಾರದಿಂದ ಯೋಜನೆ ಜಾರಿ ಮಾಡಿ ಹಾಲುಮತ ಸಮುದಾಯಕ್ಕೆ ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳಿದರು.ರಾಜ್ಯ ಮತ್ತು ಕೇಂದ್ರದಲ್ಲಿ ರೈತರ ಪರ ಸರ್ಕಾರ ಬರಬೇಕು. ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಸರ್ಕಾರ ಬರಲಿದೆ. ರಾಣಿಬೆನ್ನೂರಿನಲ್ಲಿ ಎರಡು ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೇವೆ. ರಾಣಿಬೆನ್ನೂರಿಗೆ ಮೆಗಾ ಮಾರ್ಕೆಟ್ ಮಾಡಿದ್ದೇವೆ. ಅಮೃತ ಯೋಜನೆ ಅಡಿಯಲ್ಲಿ ದಿನದ ಇಪ್ಪತ್ತು ನಾಲ್ಕು ಗಂಟೆ ನೀರು ನೀಡುವ ಯೋಜನೆ ಮಾಡಿದ್ದೇವೆ ಎಂದರು. ಕಳೆದ ಎಪ್ಪತೈದು ವರ್ಷದಲ್ಲಿ ಇಷ್ಟು ಜನ ಪ್ರಧಾನಿಗಳು ಬಂದಿದ್ದಾರೆ. ಯಾರೂ ಮನೆಗಳಿಗೆ ನಲ್ಲಿ ನೀರು ಕೊಡುವ ಯೋಚನೆ ಮಾಡಿಲ್ಲ. ಮೋದಿಯವರು ನಾಲ್ಕು ವರ್ಷದಲ್ಲಿ ೭೫ ಕೋಟಿ ಮನೆಗಳಿಗೆ ನೀರು ನೀಡಿದ್ದಾರೆ. ರಾಜ್ಯದಲ್ಲಿ ಮೊದಲು ೩೦ ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಇತ್ತು. ನಾವು ಬಂದ ಮೇಲೆ ೭೦ ಲಕ್ಷ ಮನೆಗಳಿಗೆ ನೀರು ನೀಡಿದ್ದೇವೆ. ಹಾವೇರಿಯಲ್ಲಿ ಹಾಲು ಒಕ್ಕೂಟ ಮಾಡಿರುವುದರಿಂದ ೮೦ ಸಾವಿರ ಲೀಟರ್‌ನಿಂದ ೧.೨೦ ಲಕ್ಷ ಲೀಟರ್‌ಗೆ ಏರಿದೆ. ರೈತರಿಗೆ ನಾವು ಬೇರೆ ಒಕ್ಕೂಟಕ್ಕಿಂತ ಮೂರು ರು. ಹೆಚ್ಚಿಗೆ ನೀಡುತ್ತಿದ್ದೇವೆ. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗಿದೆ. ಹಾವೇರಿಗೆ ಮೆಡಿಕಲ್ ಕಾಲೇಜು, ಲಾ ಕಾಲೇಜು, ಹೈವೆ ಎಲ್ಲವನ್ನು ಮಾಡಿದ್ದೇವೆ ಎಂದರು.ಪಕ್ಷದ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಡಾ.ಬಸವರಾಜ ಕೇಲಗಾರ ಇತರರು ಇದ್ದರು.
ಬೊಮ್ಮಾಯಿಗೆ ನ್ಯಾಯವಾದಿ ಬಿ.ಡಿ ಹಿರೇಮಠ ಬೆಂಬಲ: ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಹಿರಿಯ ನ್ಯಾಯವಾದಿ ಬಿ.ಡಿ. ಹಿರೇಮಠ ಬೆಂಬಲ ಸೂಚಿಸಿದರು. ಹಲಗೇರಿ ಗ್ರಾಮದಲ್ಲಿ ಬೊಮ್ಮಾಯಿ ಅವರ ಪರವಾಗಿ ಮಾತನಾಡಿ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಬೊಮ್ಮಾಯಿ ಅವರ ಕೊಡುಗೆ ದೊಡ್ಡದಿದೆ. ಇಂತ ಹೋರಾಟಗಾರರು ಆರಿಸಿ ಬಂದರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇವರು ಜನರ ಆಗುಹೋಗುಗಳನ್ನು ಅರಿತು, ನಿಸ್ವಾರ್ಥ ಸೇವೆ ಮಾಡುತ್ತಾರೆ. ಅವರಿಗೆ ಯಾವಾಗಲೂ ಜನರ ಸ್ಪಂದನೆ ಇರುತ್ತದೆ. ಇಂತವರು ಆರಿಸಿ ಬರಲಿ ಎಂದು ಹಲಗೇರಿ ಹಾಲಸಿದ್ದೇಶ್ವರನಲ್ಲಿ ಪ್ರಾರ್ಥಿಸುತ್ತೇನೆ. ಇವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.