ಸಾರಾಂಶ
ಅಮೀನಗಡ ಪಟ್ಟಣದ ಲಂಬಾಣಿ ತಾಂಡಾದಲ್ಲಿ ಮೂರು ದಿನ ಜರಗುವ ಶ್ರೀದುರ್ಗಾದೇವಿ, ಸಂತ ಸೇವಾಲಾಲರ ಜಾತ್ರಾ ಮಹೋತ್ಸವಕ್ಕೆ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆಗಳ ಬಗ್ಗೆ ಅಭಿಮಾನವಿರಬೇಕು. ಅದನ್ನು ಕಾಯ್ದುಕೊಳ್ಳುವಲ್ಲಿ ಸಂಸ್ಕೃತಿ ನಶಿಸದಂತೆ ಎಚ್ಚರವಹಿಸಬೇಕು ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.ಅಮೀನಗಡ ಲಂಬಾಣಿ ತಾಂಡಾದಲ್ಲಿ ಭಾನುವಾರದಿಂದ ಮೂರು ದಿನ ಜರಗುವ ಶ್ರೀದುರ್ಗಾದೇವಿ, ಸಂತ ಸೇವಾಲಾಲರ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಿ, ಮಾತನಾಡಿದ ಅವರು, ಲಂಬಾಣಿ ಸಮಾಜದ ಜಾತ್ರಾ ಮಹೋತ್ಸವ ಎಂದರೆ, ಅದು ಸಮಾಜದ ಸಂಸ್ಕೃತಿ, ಸಂಪ್ರದಾಯಗಳ ಅನಾವರಣ. ಮೂರು ವರ್ಷಕ್ಕೊಮ್ಮೆ ಜರಗುವ ಈ ಜಾತ್ರೆಯಲ್ಲಿ ಲಂಬಾಣಿ ಸಮಾಜದ ವಿಶಿಷ್ಠ ಉಡುಗೆ ತೊಡುಗೆಗಳು ಆಕರ್ಷಣೀಯವಾಗುತ್ತವೆ ಎಂದರು.
ನೀಲಾನಗರ ಬಂಜಾರ ಶಕ್ತಿಪೀಠದ ಕುಮಾರ ಮಹಾರಾಜರು ಮಾತನಾಡಿ, ಇಂದಿನ ಬಂಜಾರ ಸಮಾಜದ ಯುವಪೀಳಿಗೆ ಆಧುನಿಕ ಶೋಕಿಗಳಿಗೆ ಬಲಿಯಾಗುವುದರ ಮೂಲಕ, ನಮ್ಮ ಪರಂಪರೆ ನಶಿಸಿಹೋಗುತ್ತಿವೆ. ಸಮಾಜದವರು ಎಂದು ಹೇಳಿಕೊಳ್ಳಲು ನಮ್ಮ ಸಂಪ್ರದಾಯವೇ ಮೂಲ ಕಾರಣ. ಯುವಪೀಳಿಗೆ ನಮ್ಮ ಸಂಸ್ಕೃತಿ ಸಂರಕ್ಷಿಸುವಲ್ಲಿ ಆದ್ಯತೆ ನೀಡಬೇಕು ಎಂದರು. ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿ, ಬಂಜಾರ ಸಮಾಜದ ಮೂಲತಃ ಬಡಸಮಾಜವಾಗಿದ್ದು, ಇತ್ತೀಚೆಗೆ ಶಿಕ್ಷಣ, ರಾಜಕೀಯ, ಆರ್ಥಿಕತೆಗಳಲ್ಲಿ ಮುಂದುವರೆಯುತ್ತಿರುವುದು ಶ್ಲಾಘನೀಯ. ಬಂಜಾರ ಸಮಾಜದ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳು ಜನಮನ ಗೆದ್ದಿವೆ. ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.ಪಟ್ಟಣದ ಲಂಬಾಣಿ ತಾಂಡಾದಿಂದ ಹೊರಟ ಶ್ರೀದುರ್ಗಾದೇವಿ, ಸಂತ ಸೇವಾಲಾಲರ ಭಾವಚಿತ್ರ ಹಾಗೂ ನೀಲಾನಗರ ಬಂಜಾರ ಶಕ್ತಿಪೀಠದ ಕುಮಾರ ಮಹಾರಾಜ ಬೆಳ್ಳಿರಥದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಹಿಂತಿರುಗಿತು. ದಾರಿಯುದ್ದಕ್ಕೂ ಬಂಜಾರ ಸಮಾಜದ ಮಹಿಳೆಯರು, ಯುವಕರು ತಮ್ಮ ಸಾಂಪ್ರದಾಯಕ ಉಡುಗೆತೊಡುಗೆಗಳ ಮೂಲಕ ನೃತ್ಯದೊಂದಿಗೆ ಜನಾಕರ್ಷಿಸಿದರು. ತಾಂಡಾದ ನಾಯಕರು, ಗುರುಹಿರಿಯರು, ಯುವಕರು, ಮಹಿಳೆಯರು, ಬಂಜಾರ ಸಮಾಜದ ವಿವಿಧ ಮುಖಂಡರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.