ದೈಹಿಕ, ಮಾನಸಿಕವಾಗಿ ಸದೃಢರಾಗಿ: ಡಾ. ಗುರಮ್ಮ
KannadaprabhaNewsNetwork | Published : Oct 12 2023, 12:00 AM IST
ದೈಹಿಕ, ಮಾನಸಿಕವಾಗಿ ಸದೃಢರಾಗಿ: ಡಾ. ಗುರಮ್ಮ
ಸಾರಾಂಶ
ವಿದ್ಯಾರ್ಥಿಗಳು ಜೀವನದಲ್ಲಿ ಒತ್ತಡ, ಆತಂಕಕ್ಕೆ ಒಳಗಾಗದಿರಲಿ, ಬೀದರ್‌ನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ
ಬೀದರ್: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾವುದೇ ಒತ್ತಡ, ಆತಂಕಕ್ಕೆ ಒಳಗಾಗದೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕವಾಗಿ ಸದೃಢರಾಗಿರಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳ ಅಧ್ಯಕ್ಷೆ ಡಾ. ಗುರಮ್ಮ ಸಿದ್ದಾರೆಡ್ಡಿ ತಿಳಿಸಿದರು. ಎಫ್‌ಪಿಎಐ ಬೀದರ್ ಶಾಖೆ, ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಮಂಡಳ, ಬೀದರ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬೀದರ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಜರುಗಿದ ವಿಶ್ವ ಮಾನಸಿಕ ಆರೋಗ್ಯ ದಿನ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗದೆ ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸಬೇಕು. ಒಳ್ಳೆಯ ಗುರಿ ಇಟ್ಟುಕೊಂಡು ಮುನ್ನಡೆಯಬೇಕು, ದೇಶದ ಸತ್ಪ್ರಜೆಯಾಗಬೇಕೆಂದು ಕರೆ ನೀಡಿದರು. ಶಾಖೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀಲ್ ಮಾತನಾಡಿ, ಜೀವನದಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡ ಬಹಳ ಮುಖ್ಯ. ಸಮತೋಲನ ಆರೋಗ್ಯದ ಜೊತೆಗೆ ಜೀವನದಲ್ಲಿ ಗುರಿ ಇಟ್ಟುಕೊಂಡು, ಆ ಗುರಿಯನ್ನು ನನಸು ಮಾಡಲು ಸತತ ಪ್ರಯತ್ನಪಟ್ಟಾಗ ಯಶಸ್ಸು ಖಂಡಿತ ಸಾಧ್ಯ ಎಂದರು. ಶಾಖೆಯ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿ, ಇತ್ತೀಚೆಗೆ ಯುವ ಜನತೆ ಬಹಳಷ್ಟು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಯುವಜನತೆ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕೆಂದು ತಿಳಿಸಿದ ಅವರು, ಯುವ ಜನರ ಮಾನಸಿಕ ಆರೋಗ್ಯದ ಕುರಿತು, ಮಾನಸಿಕ ಕಾಯಿಲೆಯಿಂದ ಹೊರಬರುವ ಕ್ರಮಗಳ ಕುರಿತು, ಅದಕ್ಕೆ ಆಪ್ತಸಮಾಲೋಚನೆ, ಚಿಕಿತ್ಸೆ ಕುರಿತು” ವಿವರಿಸಿ ಮಾಹಿತಿ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಯಶ್ರೀ ಪ್ರಭಾ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತಿ ಅವಶ್ಯಕ ವಾಗಿರುವುದರಿಂದ ಮುಂದಿನ ದಿನಗಳಲ್ಲಿಯೂ ಕೂಡ ಇಂತಹ ಅರಿವು-ಜಾಗೃತಿ ಕಾರ್ಯಕ್ರಮ ಮಾಡಲು ಸಹಕರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ವೀನ್ಸ್, ಬೀದರ್‌ನ ಸದಸ್ಯರಾದ ಡಾ. ಸುಜಾತಾ ಹೊಸಮನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾನಸಿಕ ಒತ್ತಡಕ್ಕೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಅದನ್ನು ತಡೆಗಟ್ಟಲು ಮಾನಸಿಕ ರೋಗ ತಜ್ಞರ, ಆಪ್ತಸಮಾಲೋಚಕರ ಚಿಕಿತ್ಸೆಗೆ ಒಳಗಾಗಬೇಕು. ಮಾನಸಿಕ ರೋಗಿಗಳಿಗೂ ಕೂಡ ಎಲ್ಲರಂತೆ ಬದುಕುವ, ಚಿಕಿತ್ಸೆಗೆ ಒಳಗಾಗುವ ಹಕ್ಕಿದೆ. ಆದ್ದರಿಂದ ಮನೋರೋಗಕ್ಕೆ ಭಯಪಡದೇ, ಮುಂದೆ ಬಂದು ಚಿಕಿತ್ಸೆ ತೆಗೆದುಕೊಳ್ಳಬೇಕೆಂದು ತಿಳಿಸಿದರು. ರೋಟರಿ ಕ್ವೀನ್ ಅಧ್ಯಕ್ಷರಾದ ರುಚಿಕಾ ಷಾ, ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ರಾಜಕುಮಾರ ಅಲ್ಲೂರ, ಡಾ. ಸಂಗಶೆಟ್ಟಿ ಶೆಟಕಾರ, ಡಾ. ಸಚಿದಾನಂದ ಮಲಕಾಪೂರೆ, ಡಾ. ಸುಮನ್‌ಬಾಯಿ ಶಿಂಧೆ, ಪ್ರೋ. ಶೀಲಾ, ಪ್ರೋ. ಮಹೇಶ್ವರಿ, ಯುಥ್ ರೆಡ್‌ಕ್ರಾಸ್ ಸಂಯೋಜಕರಾದ ಡಾ. ಜೈಭಾರತ ಮಂಗೇಶ್ವರ, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.