ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ: ಡಿಸಿ ಸೂಚನೆ

| Published : Jul 22 2024, 01:23 AM IST

ಸಾರಾಂಶ

ಪ್ರವಾಹದ ಪರಿಸ್ಥಿತಿಯಲ್ಲಿ ಜನತೆಯ ಸುರಕ್ಷತೆಗೆ ಸಮನ್ವಯತೆಯಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ಕಬಿನಿ ಜಲಾಶಯದಿಂದ 30 ಸಾವಿರ ಕ್ಯುಸೆಕ್‌ ಕಾವೇರಿಯಿಂದ 50 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ. ಈ ಪ್ರಮಾಣ ಮುಂದೆ ಹೆಚ್ಚಬಹುದು ಅಥವಾ ಇಳಿಯಬಹುದು ಅಧಿಕಾರಿಗಳು ಸಮರೋಪಾದಿಯಲ್ಲಿ ಸನ್ನದ್ಧರಾಗಿರಬೇಕು.

ಕನ್ನಡಪ್ರಭ ವಾರ್ತೆ ತಲಕಾಡು

ಕಾವೇರಿ ಹಾಗು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕಿನಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿದ್ದು, ಜನ ಜಾನುವಾರುಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ನೀಕಾಂತ ರೆಡ್ಡಿ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಲಕಾಡಿನ ಲೋಕೋಪಯೋಗಿ ಪ್ರವಾಸಿ ಮಂದಿರಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದ್ದ ಅವರು, ಪ್ರವಾಹಕ್ಕೆ ಪೂರ್ವ ಸಿದ್ಧತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಪ್ರವಾಹದ ಪರಿಸ್ಥಿತಿಯಲ್ಲಿ ಜನತೆಯ ಸುರಕ್ಷತೆಗೆ ಸಮನ್ವಯತೆಯಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ಕಬಿನಿ ಜಲಾಶಯದಿಂದ 30 ಸಾವಿರ ಕ್ಯುಸೆಕ್‌ ಕಾವೇರಿಯಿಂದ 50 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ. ಈ ಪ್ರಮಾಣ ಮುಂದೆ ಹೆಚ್ಚಬಹುದು ಅಥವಾ ಇಳಿಯಬಹುದು ಅಧಿಕಾರಿಗಳು ಸಮರೋಪಾದಿಯಲ್ಲಿ ಸನ್ನದ್ಧರಾಗಿರಲು ಸೂಚಿಸಿದರು.

ಮಳೆ ಅಥವಾ ಪ್ರವಾಹದಿಂದ ಹಾನಿ ಗೀಡಾದ ರೈತರ ಬೆಳೆಗಳು, ಜನ ವಸತಿಗೆ ಹಾನಿಯಾಗಿರುವ ಕುರಿತು ಸರ್ಕಾರಕ್ಕೆ ತ್ವರಿತವಾಗಿ ಅಧಿಕಾರಿಗಳು ವರದಿ ಸಲ್ಲಿಸಬೇಕು. ಮಳೆ ಅಥವಾ ಪ್ರವಾಹದಲ್ಲಿ ತೊಂದರೆಗೀಡಾದ ಪ್ರದೇಶಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಿಕೊಡಲು ಸೆಸ್ಕ್ ನವರು ತ್ವರಿತ ಕ್ರಮ ಜರುಗಿಸಲು ಸೂಚಿಸಿದರು.

ವಿಶೇಷವಾಗಿ ಜಾನುವಾರಿಗೆ ಪ್ರವಾಹದ ವೇಳೆ ನದಿಪಾತ್ರದಲ್ಲಿ ಮೇಯಿಸಲು ಬಿಡದಂತೆ ಪ್ರಚಾರ ಮಾಡಿ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕು, 1.20 ಲಕ್ಷ ಕ್ಯುಸೆಕ್‌ ಗೂ ಮೇಲ್ಪಟ್ಟು ಇಲ್ಲಿನ ನದಿಯಲ್ಲಿ ನೀರು ಹರಿದಾಗ ಹೆಮ್ಮಿಗೆ ಸೇತುವೆ ಮುಳುಗಡೆಗೊಳ್ಳುತ್ತದೆ. ಸೇತುವೆ ಸನಿಹಕ್ಕೆ ನೀರು ಬರುವ ಮುನ್ನವೇ ಮುಂಜಾಗ್ರತೆ ವಹಿಸಿ ಸೇತುವೆ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿ ಜನವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಭೆಯಲ್ಲಿದ್ದ ಪೊಲೀಸ್ ಅಧಿಕಾರಿಗೆ ಸೂಚಿಸಿದರು.

ಅಗತ್ಯಬಿದ್ದರೆ ಪ್ರವಾಹ ಪೀಡಿತ ಪ್ರದೇಶದ ಜನತೆಗೆ ಅಹಾರ ಮೂಲ ಸೌಕರ್ಯ ಒದಗಿಸಲು ಸೂಕ್ತ ಕಾಳಜಿ ಕೇಂದ್ರ ತೆರೆಯಲು ಸನ್ನದ್ದರಾಗಿರಬೇಕು ಎಂದು ಪ್ರವಾಹದ ಪೂರ್ವಸಿದ್ಧತೆ ಸುರಕ್ಷತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇಲ್ಲಿನ ಸಭೆಯಲ್ಲಿ ತಾಲೂಕು ತಹಸೀಲ್ದಾರ್ ಸುರೇಶಾಚಾರ್, ತಾಪಂ ಇಒ ಸಿ.ಕೃಷ್ಣ, ಲೋಕೋಪಯೋಗಿ ಎಇಇ ಸತೀಶ್, ಎಇ ಶಿವಸ್ವಾಮಿ, ತಾಲೂಕು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಕೈಲಾಸ ಮೂರ್ತಿ, ಸೆಸ್ಕ್ ಎಇಇ ವೀರೇಶ್, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಹಾಸಿನಿ, ಟಿ.ನರಸೀಪುರ ಹಾಗು ಬನ್ನೂರು ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜ್, ವಸಂತಕುಮಾರಿ, ಟಿಎಚ್‌ಒ ಡಾ. ರವಿಕುಮಾರ್, ತಲಕಾಡು‌ಠಾಣೆ ಪಿಐ, ಆನಂದ್ ಕುಮಾರ್, ನಾಡಕಚೇರಿ ಉಪ ತಹಸೀಲ್ದಾರ್ ಇ. ಕುಮಾರ್, ರಾಜಸ್ವ ನಿರೀಕ್ಷಕ ಸಿದ್ದರಾಜು, ತಲಕಾಡು ಪಿಡಿಒ ಮಹೇಶ್, ಹೆಮ್ಮಿಗೆ ಪಿಡಿಒ ಚಿದಾನಂದ ಮೊದಲಾದವರು ಇದ್ದರು.ಪ್ರವಾಹದಲ್ಲಿ ಏರಿಳಿತವಾಗುತ್ತಿದ್ದು ಜನಜಾನುವಾರಗಳ ಸುರಕ್ಷತೆಗೆ ಅಸನ್ನದ್ಧರಾಗಿರಲು ಅಧಿಕಾರಿಗಳಿಗೆ ಇಲ್ಲಿನ ಸಭೆಯಲ್ಲಿ ಸೂಚನೆ ನೀಡಿದ್ದೇನೆ. ಕೆಲವೊಂದು ಕಡೆ ಬೆಳೆ ಹಾನಿಯಾಗಿದ್ದು, ಒಂದೆರಡು ದಿನದಲ್ಲಿ ಹಾನಿಯ ಕುರಿತು ಸರ್ವೇ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ