ಮುಂಗಾರು ವಿಪತ್ತು ನಿರ್ವಹಣೆಗೆ ಸರ್ವಸನ್ನದ್ಧರಾಗಿ: ಜಿಲ್ಲಾಧಿಕಾರಿ

| Published : May 24 2024, 12:49 AM IST / Updated: May 24 2024, 12:50 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ನಡೆಯಿತು.

ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಸಂದರ್ಭದಲ್ಲಿ ತಲೆದೋರುವ ಯಾವುದೇ ರೀತಿಯ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲ ಇಲಾಖೆಗಳು ಸರ್ವ ಸನ್ನದ್ಧರಾಗುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳಲ್ಲಿ ಒಳಚರಂಡಿ ಹಾಗೂ ನೀರು ಹರಿದುಹೋಗುವ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿ, ಯಾವುದೇ ರೀತಿಯಲ್ಲಿ ಕಲುಷಿತಗೊಳ್ಳದಂತೆ ಎಚ್ಚರವಹಿಸುವುದರ ಜತೆಗೆ ಸಾರ್ವಜನಿಕರ ಕುಂದುಕೊರತೆಗೆ ಗ್ರಾಮೀಣ ಮಟ್ಟದಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಸ್ಪಂದಿಸಲು ಕಂಟ್ರೋಲ್ ರೂಮ್ ಸ್ಥಾಪಿಸಬೇಕು ಎಂದರು.

ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅವಘಡಗಳು ಸಂಭವಿಸಬಹುದಾದ ಸ್ಥಳಗಳ ಗುರುತಿಸಬೇಕು. ಸಾರ್ವಜನಿಕರ ಕುಂದುಕೊರತೆಗೆ ಸ್ಪಂದಿಸಲು ಕಂಟ್ರೋಲ್ ರೂಮ್ ಸ್ಥಾಪನೆ ಮಾಡುವಂತೆ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಶರಾವತಿ ಮತ್ತು ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟದಲ್ಲಿ ಸರಿಯಾಗಿ ಕಾಯ್ದುಕೊಳ್ಳಬೇಕು.

ಜಲಾಶಯಗಳಿಂದ ನೀರನ್ನು ಬಿಡುವ ಮೊದಲು ಸಂಬಂಧಿಸಿದ ತಹಸೀಲ್ದಾರರು ಹಾಗೂ ಸಹಾಯಕ ಆಯುಕ್ತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿ, ಜಲಾಶಯಗಳಿಂದ ಒಮ್ಮೇಲೆ ನೀರನ್ನು ಹೊರಬಿಡದೇ ಹಂತ ಹಂತವಾಗಿ ಬಿಡಬೇಕು. ಜಲಾಶಯಗಳ ಗೇಟುಗಳು, ವಾಲ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತಿರಬೇಕು. ಜಲಾಶಯದ ಒಳಹರಿವು, ಹೊರಹರಿವು, ನೀರಿನ ಮಟ್ಟದ ಕುರಿತು ಪ್ರತಿದಿನ ಜಿಲ್ಲಾಧಿಕಾರಿ ಕಾರ್ಯಾಲಯದ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬೇಕು ಎಂದರು.

ಸರ್ಕಾರದ ಮಾರ್ಗಸೂಚಿಯನ್ವಯ ತಕ್ಷಣ ಪರಿಹಾರ ವಿತರಣೆ, ಮುಂಗಾರು ಸಿದ್ಧತೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದಲ್ಲಿ ಹಾಗೂ ಉಪವಿಭಾಗ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಬೇಕು. ಹಾನಿಯ ವರದಿಯನ್ನು ನಿಗದಿತ ನಮೂನೆಯಲ್ಲಿ ಅಪಡೇಟ್ ಮಾಡಬೇಕು. ಮಳೆಗಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತುರ್ತು ಚಿಕಿತ್ಸೆ ಮುಂಜಾಗ್ರತ ಕ್ರಮ ಅಳವಡಿಸಿಕೊಂಡು ಸಂಬಂಧಿಸಿದ ಅಧಿಕಾರಿ/ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದರು.

ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಬಿತ್ತನೆ ಮಾಡಲು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಯಾವುದೇ ಕೊರತೆಯಾಗದಂತೆ ಪೂರೈಸಬೇಕು. ಬೆಳೆಹಾನಿಗೆ ಪರಿಹಾರ ವಿತರಣೆಯಲ್ಲಿ ಜಂಟಿ ತಪಾಸಣೆ ಮಾಡಿ ತಕ್ಷಣದಲ್ಲಿ ವರದಿ ನೀಡಬೇಕು. ರಾಷ್ಟ್ರೀಯ ಹೆದ್ದಾರಿಗಳ/ ಇತರೆ ರಸ್ತೆಗಳ ಬದಿಯಲ್ಲಿರುವ ಕಚ್ಚಾ ಸಾಮಗ್ರಿಗಳನ್ನು ಹಾಗೂ ರಸ್ತೆಯ ಪಕ್ಕದ ನೀರು ಹರಿದು ಹೋಗುವ ಮಾರ್ಗವನ್ನು ಸ್ವಚ್ಛಗೊಳಿಸಿ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.

ವಿಪತ್ತು ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಾನವ ಜೀವಹಾನಿಯಾಗದಂತೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ ಡಿಸಿ, ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಅಗತ್ಯ ಸಂದರ್ಭದಲ್ಲಿ ತಕ್ಷಣದಲ್ಲಿ ಸಂಪರ್ಕಕ್ಕೆ ದೊರೆಯಬೇಕು. ಜಿಲ್ಲೆಯ ಎಲ್ಲಇಲಾಖೆಗಳು ಮತ್ತು ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಡಿಸಿಎಫ್ ರವಿಶಂಕರ್ , ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.