ಸಾರಾಂಶ
-ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಬಿಜೆಪಿ ಸಮಾವೇಶ
ಗದಗ: ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿ, ಭಾರತವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ದೇಶ ಕಾಯುವ ಸೈನಿಕನಂತೆ ಪ್ರತಿಯೊಬ್ಬ ಕಾರ್ಯಕರ್ತರು ಲೋಕಸಭೆ ಚುನಾವಣೆ ಎದುರಿಸಲು ಸನ್ನದ್ಧರಾಗುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆನೀಡಿದರು.
ಭಾನುವಾರ ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.ರಾಜ್ಯಾಧ್ಯಕ್ಷರಾದ ಆನಂತರ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಜೀವನದಲ್ಲಿ ಗುರು ಮತ್ತು ಗುರಿ ಎರಡೂ ಮುಖ್ಯ. ನನ್ನ ಜೀವನದ ಗುರುಗಳು ನನ್ನ ತಂದೆ ಬಿ.ಎಸ್. ಯಡಿಯೂರಪ್ಪ ಅವರು, ನನ್ನ ಮುಂದಿರುವ ಗುರಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸುವುದು. ಇದಕ್ಕೆ ಕಾರ್ಯಕರ್ತರ ಬಂಧುಗಳ ಶ್ರಮ ಮತ್ತು ಸಂಘಟನೆ ಅತ್ಯಂತ ಅವಶ್ಯವಾಗಿದೆ ಎಂದರು.ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆಯಲ್ಲಿ ಕಾಂಗ್ರೆಸ್ ನಾಯಕರು ಇದು ಶೇ. 40 ಕಮಿಷನ್ ಸರ್ಕಾರ ಎಂದು ಯಾವುದೇ ಆಧಾರಗಳಿಲ್ಲದೇ ಆರೋಪ ಮಾಡಿದ್ದರು. ಅದನ್ನೇ ನಂಬಿದ ರಾಜ್ಯದ ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳ ಗತಿಸಿದರೂ ಉದ್ದುದ್ದ ಭಾಷಣ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆಂದರು ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ ಭೀಕರ ಬರಗಾಲ ಇದೆ, ಇವರಿಗೆ ರೈತರ ನೆರವಿಗೆ ಧಾವಿಸಲು ಹಣವಿಲ್ಲ. 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಸ್ಪಂದನೆ ಇಲ್ಲ, ಕಿಂಚಿತ್ತೂ ಕನಿಕರ ಇಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರ ಪಾಲಿಗೆ ಮರಣಶಾಸನವಾಗಿ ಮಾರ್ಪಟ್ಟಿದೆ. ಬೆಂಗಳೂರಿಗೆ ಬಂದರೆ ಗೊತ್ತಾಗುತ್ತದೆ. ಕಾಂಗ್ರೆಸ್ ಶೇ. 80 ಕಮೀಷನ್ ಸರ್ಕಾರ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವ ಘಟನೆ ರಾಜ್ಯವೇ ತಲೆ ತಗ್ಗಿಸುವಂತಹದ್ದು. ಆದರೆ ಮುಖ್ಯಮಂತ್ರಿ ಅ ದಲಿತ ಮಹಿಳೆಯ ಮನೆಗೆ ಭೇಟಿ ನೀಡುವ ಸೌಜನ್ಯವನ್ನು ತೋರುತ್ತಿಲ್ಲ. ಬಡವರ, ದಲಿತರ, ರೈತ ವಿರೋಧಿ ಸರ್ಕಾರ ಇದಾಗಿದ್ದು, ಸರ್ಕಾರದಲ್ಲಿ ಇರುವವರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಬರಗಾಲದಿಂದ ರೈತರು ತತ್ತರಿಸಿದರೆ ಕೊಡಲು ಹಣವಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಕೊಡುತ್ತೇವೆ ಎನ್ನುತ್ತಾರೆ. ಇಷ್ಟೊಂದು ಪ್ರಮಾಣದ ತುಷ್ಟೀಕರಣ ಯಾಕೆ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಇದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದರು.ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಷಯದಲ್ಲಿ ಕಾಂಗ್ರೆಸ್ ನಾಯಕರು ವ್ಯಾಪಕ ಟೀಕೆ ಮಾಡುತ್ತಿದ್ದರು. ವಿಜಯೇಂದ್ರ ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಬಾಯಿ ಗಪ್ ಚುಪ್ ಆಗಿದೆ. ವಿಜಯೇಂದ್ರ ನೇಮಕದಿಂದ ಬಿಜೆಪಿಗೆ ಆನೆ ಬಲ ಬಂದಿದೆ. ನಾನು ಶಾಸಕನಾಗಿ 6 ತಿಂಗಳದಿಂದ ಭೂಮಿಪೂಜೆ ಮಾಡಿಲ್ಲ, ಭಾಗ್ಯಗಳನ್ನು ಘೋಷಣೆ ಮಾಡಿ ಖಜಾನೆ ಖಾಲಿ ಮಾಡಿದ್ದಾರೆ ಎಂದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ನಾವೆಲ್ಲ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಯೇ ಉಳಿಸುವ ಪ್ರಯತ್ನ ಮಾಡೋಣ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ, ಸಂಸದ ಪಿ.ಸಿ. ಗದ್ದಿಗೌಡ್ರ, ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ, ಉಷಾ ದಾಸರ, ಸುನಂದಾ ಬಾಕಳೆ, ಉಮೇಶಗೌಡ ಪಾಟೀಲ, ಎಂ.ಎಸ್. ಕರಿಗೌಡ್ರ, 9 ಮಂಡಳಗಳ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು. ಸಿದ್ದರಾಮಪ್ಪ ಮೊರಬದ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.ಬೈಕ್ ರ‍್ಯಾಲಿಬೈಕ್ ರ‍್ಯಾಲಿ ಮೂಲಕ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ವಿಜಯೇಂದ್ರ, ಆನಂತರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದರು.ಮೋದಿಯೇ ಗ್ಯಾರಂಟಿ ಸಾಕು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ಪ್ರಧಾನಿ ಮೋದಿ ಅವರು ಅಧಿಕಾರ ಬರುವುದು ಅಷ್ಟೇ ಸತ್ಯ. ದುಷ್ಟಶಕ್ತಿಗಳು ಅವರನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹಲವಾರು ಗ್ಯಾರಂಟಿಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಜನರು ನಿಶ್ಚಯ ಮಾಡಿ ಆಗಿದೆ, ನಮಗೆ ಪ್ರಧಾನಿ ಮೋದಿಯೇ ದೊಡ್ಡ ಗ್ಯಾರಂಟಿ, ಅವರಿಗಿಂತ ಬೇರೆ ಗ್ಯಾರಂಟಿ ಮತ್ತೊಂದಿಲ್ಲ ಎಂದರು.