ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಿ

| Published : Jul 25 2025, 12:31 AM IST

ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು. ನಿಮ್ಮದೇ ಆದ ಸೀಮಿತ ಚೌಕಟ್ಟಿನೊಳಗೆ ಇರದೇ ಹೊರಗೆ ಬಂದು ಸಾಧನೆ ಮಾಡಲೇಬೇಕೆಂಬ ಛಲ ಹೊಂದಿದರೆ ಯಾವುದೂ ಅಸಾಧ್ಯವಲ್ಲ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ದಾವಣಗೆರೆ: ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು. ನಿಮ್ಮದೇ ಆದ ಸೀಮಿತ ಚೌಕಟ್ಟಿನೊಳಗೆ ಇರದೇ ಹೊರಗೆ ಬಂದು ಸಾಧನೆ ಮಾಡಲೇಬೇಕೆಂಬ ಛಲ ಹೊಂದಿದರೆ ಯಾವುದೂ ಅಸಾಧ್ಯವಲ್ಲ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಟ್ರಿನಿಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ತಂದೆ ತಾಯಿಗೆ ನೀವು ಉತ್ತಮ ಕೆಲಸಕ್ಕೆ ಹೋಗಬೇಕೆಂಬ ಕನಸು ಇರುತ್ತದೆ. ಆದರೆ, ನೀವು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದೀರೋ ಆ ಕ್ಷೇತ್ರದಲ್ಲಿ ಮುನ್ನಡೆಯಲು ಬಿಡದಿದ್ದಾಗ ರೆಬಲ್ ಆಗುತ್ತೀರಾ. ಹಾಗಾಗಿ, ಈಗಿನಿಂದಲೇ ಮುಂದೆ ಏನು ಮಾಡಬೇಕೆಂಬ ದೃಢ ನಿರ್ಧಾರಕ್ಕೆ ಬನ್ನಿ. ಸಂಕಲ್ಪ ತೊಡಿ. ಸಾಧಿಸಿಯೇ ತೀರುತ್ತೇವೆಂಬ ಕಠಿಣ ನಿರ್ಧಾರ ತಳೆದರೆ ಸಾಧನೆ ಕಷ್ಟವಾಗದು ಎಂದು ಅಭಿಪ್ರಾಯಪಟ್ಟರು.ಇಂದು ಎಐ ನಂಥ ತಂತ್ರಜ್ಞಾನವೂ ಬಂದಿದೆ. ಇದಕ್ಕೆ ವಿದ್ಯಾರ್ಥಿ ಸಮೂಹ ಒಗ್ಗಿಗೊಳ್ಳಬೇಕು. ಎಲ್ಲವೂ ಮಾನವರಿಂದಲೇ ಆಗುತ್ತದೆ ಎಂಬುದು ಭವಿಷ್ಯದಲ್ಲಿ ಊಹಿಸಿಕೊಳ್ಳುವುದು ಕಷ್ಟ. ತಂತ್ರಜ್ಞಾನ ಬೆಳೆದಂತೆ ನಾವೂ ಆಲೋಚನಾ ಕ್ರಮದ ಜೊತೆಗೆ ಕಲಿಯಲೇಬೇಕಾದ ಅವಶ್ಯಕತೆ ಇದೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಕಷ್ಟಪಟ್ಟು ದುಡಿದರೆ, ಹೆಚ್ಚು ಹೆಚ್ಚು ಪುಸ್ತಕ ಓದಿದರೆ, ಜ್ಞಾನ, ಆಕರ್ಷಕ ವ್ಯಕ್ತಿತ್ವ, ಗುಣಗಳನ್ನು ಬೆಳೆಸಿಕೊಂಡರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಸಲಹೆ ನೀಡಿದರು.ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ. ಕನ್ನಡ ಜೊತೆಗೆ ಇಂಗ್ಲಿಷ್‌ನಲ್ಲೂ ಮಾತನಾಡಿ. ಭಾಷಾ ಜ್ಞಾನ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. ಪಠ್ಯಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಫ್ಯಾಷನ್, ಕಲೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಿ. ಯಾವುದೇ ಹಿಂಜರಿಕೆಯಿಲ್ಲದೇ ನಿಮಗೆ ಇರುವ ಆಸಕ್ತಿಯನ್ನು ತೋರ್ಪಡಿಸಿ ಎಂದರು.ಇಂದು ಸರ್ಕಾರಿ ಕೆಲಸಗಳಲ್ಲಿ ಕೆಳಹಂತದ ನೌಕರರು ಮೇಲಿನ ಅಧಿಕಾರಿಗಳಿಗಿಂತ ಬುದ್ಧಿವಂತರಾಗಿದ್ದರೆ ಸ್ಯಾಡಿಸಂ ಇರುತ್ತದೆ. ಹಾಗಾಗಿ, ಎಲ್ಲಾ ಕಡೆಗಳಲ್ಲಿಯೂ ನಮ್ಮ ಪ್ರತಿಭೆ, ಕೌಶಲ್ಯ, ಬುದ್ಧಿವಂತಿಕೆ ತೋರ್ಪಡಿಸಿದರೆ ಸಹಿಸಿಕೊಳ್ಳುವುದಿಲ್ಲ. ಆದ್ರೆ, ಐಎಎಸ್, ಐಪಿಎಸ್, ಕೆಎಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಿ ಯಶಸ್ವಿಯಾಗಬೇಕು. ಇದಕ್ಕಾಗಿ ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಶ್ರೀ ಗೌತಮ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ವಿಜಯ್, ಕಾರ್ಯದರ್ಶಿಗಳಾದ ವರ್ಷ ವಿ.ಜೈನ್, ನಿರ್ದೇಶಕರಾದ ಮೋಕ್ಷ ವಿ.ಚವ್ಹಾಣ್, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಂ.ರೇಖಾ, ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಾನು ಸೋತಿದ್ದರೂ

ಸುಮ್ಮನೆ ಕುಳಿತಿಲ್ಲ: ಜಿಬಿವಿನಾನು ಜೀವನದಲ್ಲಿ ಸವಾಲು ತೆಗೆದುಕೊಂಡೆ. ಪಕ್ಷೇತರ ಅಭ್ಯರ್ಥಿಯಾಗಿ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದೆ. ನನಗೆ ಯಾವ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಸವಾಲಾಗಿ ತೆಗೆದುಕೊಂಡು ಕಣಕ್ಕಿಳಿದೆ. ಟಿಕೆಟ್ ಸಿಗದಿದ್ದರೂ ಇಡೀ ಕರ್ನಾಟಕ ರಾಜ್ಯದಲ್ಲಿ ಸ್ಪರ್ಧೆ ಮಾಡಿದ್ದ ಎಲ್ಲಾ ಪಕ್ಷೇತರ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದ ಪಕ್ಷೇತರ ಅಭ್ಯರ್ಥಿಯಾದೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಜನರ ನಂಬಿಕೆ ಉಳಿಸಿಕೊಂಡೆ. ಲೋಕಸಭೆ ಚುನಾವಣೆ ಬಳಿಕ ಬೀದರ್, ಚಾಮರಾಜನಗರ, ಮೈಸೂರು ಸೇರಿದಂತೆ ಎಲ್ಲೆಡೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೇನೆ. ಸೋಲಿಸಿದರೂ ಸುಮ್ಮನೆ ಕುಳಿತಿಲ್ಲ. ರಾಜ್ಯಾದ್ಯಂತ ಓಡಾಡುತ್ತಿದ್ದೇನೆ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.