ಪ್ರವಾಹ ಸ್ಥಿತಿ ಎದುರಿಸಲು ಮುಂಜಾಗ್ರತೆ ವಹಿಸಿ: ಶಾಸಕ ಬಾಬಾಸಾಹೇಬ ಪಾಟೀಲ

| Published : Jul 28 2024, 02:04 AM IST

ಪ್ರವಾಹ ಸ್ಥಿತಿ ಎದುರಿಸಲು ಮುಂಜಾಗ್ರತೆ ವಹಿಸಿ: ಶಾಸಕ ಬಾಬಾಸಾಹೇಬ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಅತಿವೃಷ್ಟಿಯಿಂದ ತಾಲೂಕಿನಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಅತಿವೃಷ್ಟಿಯಿಂದ ತಾಲೂಕಿನಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ತೊಂದರೆಗಳಿಗೆ ಕೂಡಲೇ ಸ್ಪಂದಿಸುವ ಕಾರ್ಯವನ್ನು ತಾಲೂಕು ಮಟ್ಟದ ಅಧಿಕಾರಿಗಳು ಮಾಡಬೇಕು, ಈ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಾಲೂಕು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಪಟ್ಟಣದ ಆಡಳಿತ ಸೌಧದಲ್ಲಿ ಶನಿವಾರ ಟಾಸ್ಕ್‌ ಫೋರ್ಸ್‌ ಸಮಿತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಲಪ್ರಭೆ ಮೈದುಂಬಿ ಹರಿಯುತ್ತಿದೆಯಾದರೂ ಸದ್ಯಕ್ಕೆ ನೆರೆಯ ಸನ್ನಿವೇಶವಿಲ್ಲ. ಆದರೂ ಸಹ ಮುನ್ನೆಚ್ಚರಿಕೆಯಾಗಿ ನದಿಪಾತ್ರದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು. ಅತಿಯಾದ ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ತಾಲೂಕಾಡಳಿತಕ್ಕೆ ವರದಿ ನೀಡಿ, ಸರ್ಕಾರದಿಂದ ದೊರೆಯುವ ಪರಿಹಾರವನ್ನು ಸಂತ್ರಸ್ತರಿಗೆ ದೊರಕಿಸಿಕೊಂಡಬೇಕೆಂದು ಸೂಚನೆ ನೀಡಿದರು.

ನೆರೆಯ ಕುರಿತು ತಾಲೂಕಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ತಹಸೀಲ್ದಾರ ರವೀಂದ್ರ ಹಾದಿಮನಿ, ನದಿಪಾತ್ರದ ಎಲ್ಲ ಗ್ರಾಮಗಳ ಗ್ರಾಮಸ್ಥರಿಗೂ ನೆರೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ನದಿದಂಡೆಯಲ್ಲಿ ಬರುವ ಎಲ್ಲ ಗ್ರಾಮಗಳು ಸೇರಿ ಒಟ್ಟು 32 ಕಡೆಗಳಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಜಾನುವಾರ ರಕ್ಷಣೆಗೂ 44 ಕೇಂದ್ರ ತೆರೆಯಲಾಗಿದೆ. ಮುನ್ನಚ್ಚರಿಕೆಯಾಗಿ ಒಂದು ಬೋಟ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಪ್ರವಾಹ ಸಂಭವಿಸುವ ಮುನ್ಸೂಚನೆ ಇಲ್ಲದಿದ್ದರೂ ಅಗತ್ಯ ಕ್ರಮಗಳನ್ನು ತಾಲೂಕಾಡಳಿತದಿಂದ ಮಾಡಲಾಗಿದೆ ಎಂದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಂದಾಜು 50 ಮನೆಗಳು ಬಿದ್ದಿರುವ ಮಾಹಿತಿ ಇದೆ, ಈ ಕುರಿತು ಈಗಾಗಲೇ ತಂಡ ರಚಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ತಾಪಂ ಇಒ ರವೀಂದ್ರ ಘೋರ್ಪಡೆ, ಪಿಎಸೈ ಪ್ರವೀಣ ಗಂಗೋಳ, ಹೆಸ್ಕಾಂ ಎಇಇ ಮಹೇಶ್ವರ ಹಿರೇಮಠ, ಪಪಂ ಮುಖ್ಯಾಧಿಕಾರಿ ಎಂ.ವಿ. ಹಿರೇಮಠ, ಬಿಇಒ ತುಬಾಕಿ, ಪಿಡಬ್ಲುಡಿ ಸಂಜೀವ ಮಿರಜಕರ, ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.

ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪಟ್ಟಣ ಪಂಚಾಯತಿ ಅಥವಾ ಗ್ರಾಮ ಪಂಚಾಯತಿಗಳಾಗಲಿ ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಡೆಂಘೀ ತಡೆಯಲು ಶ್ರಮವಹಿಸಬೇಕು. ಅಂಗನವಾಡಿ, ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಸೋರುವ ಕೊಠಡಿಗಳಲ್ಲಿ ಕೂಡಿಸಬೇಡಿ, ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಿದ್ದಲ್ಲಿ ಅವುಗಳನ್ನು ಬಂದ್‌ ಮಾಡಿ ಪರ್ಯಾಯ ವ್ಯವಸ್ಥೆ ಮಾಡಬೇಕು.

- ಬಾಬಾಸಾಹೇಬ ಪಾಟೀಲ, ಶಾಸಕರು