ಮುಂಗಾರು ಸಮಸ್ಯೆ ಎದುರಿಸಲು ಸಿದ್ಧರಾಗಿರಿ: ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ

| Published : May 17 2025, 01:31 AM IST

ಮುಂಗಾರು ಸಮಸ್ಯೆ ಎದುರಿಸಲು ಸಿದ್ಧರಾಗಿರಿ: ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ನದ್ಧರಾಗಬೇಕು.

ಕಾರವಾರ: ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಕಂಡು ಬರಬಹುದಾದ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ 24*7 ಸನ್ನದ್ಧರಾಗಿರುವಂತೆ ಹಾಗೂ ಎಲ್ಲ ತಾಲೂಕುಗಳಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.ನಗರದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಸಿದ್ಧತೆ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ 24*7 ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಅರಣ್ಯ, ಹೆಸ್ಕಾಂ, ಬಿ.ಎಸ್.ಎನ್.ಎಲ್ ಕಚೇರಿಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ತಿಳಿಸಿದರು.

ಈ ಬಾರಿ ಹಿಂದಿನಂತೆ ಯಾವುದೇ ಸಮಸ್ಯೆಯಾಗದಂತೆ ಕೈಗೊಂಡಿರುವ ಕಾಮಗಾರಿಗಳನ್ನು ಆದ್ಯತೆಯಲ್ಲಿ ಮುಕ್ತಾಯಗೊಳಿಸಿ ವರದಿ ನೀಡುವಂತೆ ಸಣ್ಣ ನೀರಾವರಿ ಮತ್ತು ಜಿಪಂ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳನ್ನು ಈ ತಿಂಗಳೊಳಗೆ ಮುಕ್ತಾಯಗೊಳಿಸುವಂತೆ ಹಾಗೂ ರಸ್ತೆಗಳ ಪಕ್ಕದಲ್ಲಿ ಚರಂಡಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಹಾಗೂ ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಎಚ್ಚರವಹಿಸಬೇಕು, ಶಿರಸಿ-ಕುಮಟಾ ರಸ್ತೆಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಸಂಪೂರ್ಣ ಮುಕ್ತಾಯಗೊಳಿಸಬೇಕು ಎಂದರು.

ಈಗಾಗಲೇ ಗುರುತಿಸಲಾಗಿರುವ ಗುಡ್ಡ ಕುಸಿತ ಪ್ರದೇಶದಲ್ಲಿ ಸ್ಪಾಟರ್ಸ್ ನೇಮಕ ಮಾಡಲಾಗಿದೆ. ಅವರು ನಿರಂತರವಾಗಿ ನಿಗಾ ವಹಿಸಬೇಕು. ಹೆದ್ದಾರಿಯಲ್ಲಿ ಅಪಾಯಕಾರಿ ಪ್ರದೇಶಗಳಲ್ಲಿ ಸೂಕ್ತ ಎಚ್ಚರಿಕೆ ಫಲಕ, ಬ್ಯಾರಿಕೇಡ್ ಸೇರಿದಂತೆ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲೆಯ ಶಾಲೆ, ಅಂಗನವಾಡಿ, ಕಾಲೇಜುಗಳ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳು ಮತ್ತು ವಿದ್ಯುತ್ ತಂತಿಗಳನ್ನು ತೆರವುಗೊಳಿಸುವ ಕುರಿತಂತೆ ಮತ್ತು ಶಿಥಿಲ ಕಟ್ಟಡಗಳಿದ್ದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕು. ಅಗತ್ಯ ಔಷಧಗಳ ಕೊರತೆಯಾಗಬಾರದು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಲಭ್ಯವಿರಬೇಕು. ವೈದ್ಯಕೀಯ ಉಪಕರಣಗಳು ಹಾಗೂ ಆಂಬುಲೆನ್ಸ್ ಗಳು ಸುಸ್ಥಿತಿಯಲ್ಲಿರುವಂತೆ ಎಚ್ಚರವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕಚ್ಚಾ ಮನೆಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅತೀ ಹೆಚ್ಚು ಮಳೆ ಬೀಳುವ ಮುನ್ಸೂಚನೆ ದೊರೆತ ಕೂಡಲೇ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಮಾನ್ಸೂನ್ ಅವಧಿಯಲ್ಲಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಬೇಕು. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಮತ್ತು ಸಹಕಾರದಿಂದ ಒಟ್ಟಾಗಿ ಕಾರ್ಯನಿರ್ವಹಿಸುವುದರ ಮೂಲಕ ಜಿಲ್ಲೆಯಲ್ಲಿ ಮಾನ್ಸೂನ್ ವೇಳೆಯಲ್ಲಿ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯವಿರುವ ನೆರವು ಒದಗಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಮತ್ತಿತರರು ಇದ್ದರು.