ಮಳೆಗಾಲ ಸಮರ್ಥವಾಗಿ ಎದುರಿಸಲು ಅಧಿಕಾರಿಗಳ ತಂಡ ಸನ್ನದ್ಧವಾಗಿರಬೇಕು: ಎಸಿ ಮೊಹಾಪಾತ್ರ

| Published : May 19 2024, 01:53 AM IST

ಮಳೆಗಾಲ ಸಮರ್ಥವಾಗಿ ಎದುರಿಸಲು ಅಧಿಕಾರಿಗಳ ತಂಡ ಸನ್ನದ್ಧವಾಗಿರಬೇಕು: ಎಸಿ ಮೊಹಾಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಭಾಂಗಣದಲ್ಲಿ ಶನಿವಾರ ಪುತ್ತೂರು ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪದ ಬಗ್ಗೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು,

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಎರಡು ನದಿಗಳ ಸಂಗಮ ತಾಣವಾಗಿರುವ ಉಪ್ಪಿನಂಗಡಿಯಲ್ಲಿ ಮಳೆಗಾಲದಲ್ಲಿ ಪ್ರವಾಹದ ಭೀತಿಯೂ ಇದ್ದು, ಮುಂಬರುವ ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳ ತಂಡ ಸನ್ನದ್ಧರಾಗಬೇಕು. ಪ್ರಾಕೃತಿಕ ವಿಕೋಪಗಳು ಡಿಢೀರ್ ಸಂಭವಿಸುವುದರಿಂದ ರಾತ್ರಿ ಹಗಲೆನ್ನದೆ ಅಧಿಕಾರಿಗಳು ಜಾಗೃತರಾಗಿದ್ದು, ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಿ ಬರಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ತಿಳಿಸಿದರು.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಭಾಂಗಣದಲ್ಲಿ ಶನಿವಾರ ಪುತ್ತೂರು ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪದ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ತಾಲೂಕು ಮಟ್ಟದಲ್ಲಿ ಈಗಾಗಲೇ ಸಹಾಯವಾಣಿಯನ್ನು ತೆರೆಯಲಾಗಿದೆ. ಉಪ್ಪಿನಂಗಡಿಯಲ್ಲಿಯೂ ಸಹಾಯವಾಣಿ ತೆರೆಯಲಾಗುವುದು. ಏನಾದರೂ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಯಾದ ೦೮೨೫೧ - ೨೩೦೩೪೯ಗೆ ಕರೆ ಮಾಡಬಹುದು. ಕರೆ ಸ್ವೀಕರಿಸದಿದ್ದರೆ. ಸಾರ್ವಜನಿಕರು ಸಮಸ್ಯೆಗಳನ್ನು ಕಡೆಗಣಿಸಿದರೆ ಅಂತಹ ಅಧಿಕಾರಿಗಳನ್ನು ಕರ್ತವ್ಯದಿಂದಲೇ ವಜಾ ಮಾಡಲಾಗುವುದು ಎಂದು ಎಚ್ಚರಿಸಿದ ಎಸಿ, ಪ್ರತಿ ಗ್ರಾ.ಪಂ.ನಲ್ಲಿ ಪಿಡಿಒ ನೇತೃತ್ವದಲ್ಲಿ ವಿಎ, ಮೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನೊಳಗೊಂಡು ಉಪಸಮಿತಿಗಳನ್ನು ರಚಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಈ ತಂಡವು ಪರಸ್ಪರ ಸಂಪರ್ಕದಲ್ಲಿದ್ದು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಿದೆ. ಅಧಿಕಾರಿಗಳು ಸ್ಪಂದಿಸದಿದ್ದರೆ, ನನಗೆ ಅಥವಾ ತಹಸೀಲ್ದಾರ್‌ಗೆ ನೇರವಾಗಿ ಕರೆ ಮಾಡಿ ಎಂದರು.

ಚರಂಡಿ ಹೂಳೆತ್ತಿ, ಅಪಾಯಕಾರಿ ಮರಗಳ ತೆರವು: ಮರದ ಗೆಲ್ಲುಗಳನ್ನು, ಅಪಾಯಕಾರಿ ಮರಗಳನ್ನು ತೆರವುಗೊಳೀಸಲು ಮೆಸ್ಕಾಂ ಹಾಗೂ ಅರಣ್ಯ ಇಲಾಖೆಗೆ ನಿರ್ದೇಶನ, ಹೂಳು ತುಂಬಿದ ಎಲ್ಲ ರಾಜಕಾಲುವೆಗಳು, ರಸ್ತೆ ಬದಿಯ ಚರಂಡಿಗಳನ್ನು ಸರಾಗವಾಗಿ ಮಳೆ ನೀರು ಹರಿದುಹೋಗುವ ಹಾಗೆ ಮಾಡಲು ಲೋಕೋಪಯೋಗಿ ಇಲಾಖೆಗೆ, ಗ್ರಾ.ಪಂ.ಗಳಿಗೆ ನಿರ್ದೇಶನ , ಸೊಳ್ಳೆಗಳ ಲಾರ್ವಗಳ ನಾಶಕ್ಕೆ ಆರೋಗ್ಯ ಇಲಾಖೆಗೆ ನಿರ್ದೇಶನ, ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಗ್ರಾ.ಪಂ. ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.

ಪಾಕೃತಿಕ ವಿಕೋಪಗಳು ಸಂಭವಿಸಿದಾಗ ಅದರಿಂದ ಹೇಗೆ ರಕ್ಷಣೆಯನ್ನು ಪಡೆಯುವ ಬಗ್ಗೆ ಪುತ್ತೂರಿನಲ್ಲಿ ಇಂದು ಅಣಕು ಪ್ರದರ್ಶನ ಏರ್ಪಡಿಸಲಾಗಿದ್ದು, ಮುಂದಿನ ವಾರದಲ್ಲಿ ಉಪ್ಪಿನಂಗಡಿಯಲ್ಲಿಯೂ ಅಣಕು ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು.

ಪುತ್ತೂರು ತಹಸೀಲ್ದಾರ್ ಕುಂಞ ಅಹ್ಮದ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹನುಮ ರೆಡ್ಡಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್‌, ಎಸಿಎಫ್ ಸುಬ್ಬಯ್ಯ ನಾಯ್ಕ ಉಪಸ್ಥಿತರಿದ್ದರು.

ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ಎಂ.ಎ., ಭರತ್ ಕುಮಾರ್ ವಿ., ಅರಣ್ಯ ಇಲಾಖೆಯ ಸಂದೀಪ್, ಹರ್ಷ ವಿ., ವಿದ್ಯಾರಾಣಿ, ಸಿಡಿಪಿಒ ಮಂಗಳಾ ಕೆ., ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ಗ್ರಾಮೀಣ ಉದ್ಯೋಗ ಖಾತರಿಯ ತಾ.ಪಂ. ಸಹಾಯಕ ನಿರ್ದೇಶಕಿ ಶೈಲಜಾ ಎ., ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ., ಪಶು ಸಂಗೋಪನಾ ಇಲಾಖೆಯ ಡಾ. ಉಷಾ ಎನ್., ಮೆಸ್ಕಾಂ ಇಲಾಖೆಯ ಎಇಇ ರಾಮಚಂದ್ರ, ಸಹಾಯಕ ಅಭಿಯಂತರರಾದ ನಿತಿನ್ ಕುಮಾರ್, ಪಿಡಬ್ಲ್ಯೂ ಜೂನಿಯರ್ ಎಂಜಿನಿಯರ್ ಎಲ್.ಸಿ. ಸಿಕ್ವೇರಾ, ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಸೀಲ್ದಾರ್ ಚೆನ್ನಪ್ಪ ಗೌಡ, ವಿವಿಧ ಗ್ರಾ.ಪಂ. ಪಿಡಿಒಗಳು, ಗೃಹರಕ್ಷಕದಳದವರು, ಮೊದಲಾದವರು ಹಾಜರಿದ್ದರು. ಉಪ್ಪಿನಂಗಡಿ ಹೋಬಳಿಯ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.