ಸರ್ಕಾರ ರೂಪಿಸಿರುವ ಯೋಜನೆ ಅಧಿಕಾರಿಗಳು ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು.

ಬಳ್ಳಾರಿ: ಪೌರ ಕಾರ್ಮಿಕರ ಕಲ್ಯಾಣ ಮತ್ತು ಅವರ ಸಮಸ್ಯೆಗಳ ಪರಿಹಾರಕ್ಕೆ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅತ್ಯಂತ ಸಂವೇದನಾಶೀಲರಾಗಿ ಹಾಗೂ ಮುಂಚೂಣಿಯಲ್ಲಿ ನಿಂತು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹೇಳಿದರು.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾವು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸೆಪ್ಟೆಂಬರ್ ತಿಂಗಳಿಗೆ ಒಂದು ವರ್ಷ ಪೂರೈಸಿದ್ದು, ತಮ್ಮ ಅಧಿಕಾರಾವಧಿಯ ಆರಂಭದಲ್ಲಿಯೇ ಪೌರಕಾರ್ಮಿಕರು ನಿವೃತ್ತರಾಗುವ ದಿನವೇ ಪಿಂಚಣಿ ಹೊರತುಪಡಿಸಿ,ಅವರ ಎಲ್ಲ ಸೌಲಭ್ಯ ತಲುಪಿಸಬೇಕೆಂದು ಆಯುಕ್ತರಿಗೆ ಸೂಚನೆ ನೀಡಲಾಗಿತ್ತು. ಈ ಸಲಹೆ ಪಾಲಿಸುತ್ತಿರುವುದಕ್ಕೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಹಿಂದೆ ಬಿಬಿಎಂಪಿಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹಂಚಿಕೊಂಡ ಜಿಲ್ಲಾಧಿಕಾರಿಗಳು, ಪೌರಕಾರ್ಮಿಕರಿಗೆ ವೈದ್ಯಕೀಯ ವೆಚ್ಚ ಮರುಪಾವತಿ, ನಿವೃತ್ತಿ ನಂತರದ ಸೌಲಭ್ಯಗಳು ಸಕಾಲಕ್ಕೆ ಸಿಗಬೇಕು ಎಂದು ಒತ್ತಿ ಹೇಳಿದ ಅವರು, ಕೆಲಸದ ಸ್ಥಳಗಳಲ್ಲಿ ವಿಶೇಷವಾಗಿ ಮಹಿಳಾ ಪೌರಕಾರ್ಮಿಕರಿಗೆ ಅಗತ್ಯ ಸುರಕ್ಷತೆ ಒದಗಿಸುವಂತೆ ಸೂಚಿಸಿದರು.

ಸರ್ಕಾರ ರೂಪಿಸಿರುವ ಯೋಜನೆ ಅಧಿಕಾರಿಗಳು ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. ಕೇವಲ ಸಭೆಗಳಿಗಷ್ಟೇ ಸೀಮಿತವಾಗಿರದೆ ನಿರಂತರವಾಗಿ ಪರಿಶೀಲನಾ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದರು.

ಸರ್ಕಾರದಿಂದ ಪೌರಕಾರ್ಮಿಕರಿಗೆ ನಿವೇಶನ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತದಿಂದ ತೆರವುಗೊಳಿಸಲಾದ ಒತ್ತುವರಿ ಜಾಗವನ್ನು ನಿವೇಶನಕ್ಕಾಗಿ ನೀಡಲು ಸಿದ್ಧವಿರುವುದಾಗಿ ಭರವಸೆ ನೀಡಿದರು. ಅದೇ ರೀತಿಯಾಗಿ ಮುಂಜಾನೆ ಕರ್ತವ್ಯಕ್ಕೆ ತೆರಳುವ ವೇಳೆ ಪೌರಕಾರ್ಮಿಕರಿಗೆ ಸಾರಿಗೆ ಸಮಸ್ಯೆಯಾಗುತ್ತಿರುವುದನ್ನು ಮನಗಂಡು ಅಗತ್ಯವಿರುವ ಕಡೆ ಜಿಲ್ಲಾಡಳಿತದಿಂದ ವಾಹನ ಸೌಲಭ್ಯ ಒದಗಿಸುವ ಕುರಿತು ಪರಿಶೀಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಪೌರಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೂ ಇಡೀ ನಗರದ ಸ್ವಚ್ಛತೆ ಮತ್ತು ವ್ಯವಸ್ಥೆ ಹದಗೆಡುತ್ತದೆ, ಅವರ ಶ್ರಮ ಸಮಾಜ ಹಾಗೂ ಆಡಳಿತ ಸದಾ ಗೌರವಿಸಬೇಕು ಮತ್ತು ಅವರ ಸಮಸ್ಯೆ ಬಾಕಿ ಉಳಿಯದಂತೆ ಅಧಿಕಾರಿಗಳು ಶೀಘ್ರ ಪರಿಹರಿಸಬೇಕು ಎಂದು ಅಭಿಪ್ರಾಯಪಟ್ಟರು.

ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸ್ವಚ್ಛತೆ ಕಾಪಾಡುವುದು ಕೇವಲ ಅವರೊಬ್ಬರ ಜವಾಬ್ದಾರಿಯಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕರ ಮೂಲಭೂತ ಕರ್ತವ್ಯವಾಗಿದೆ ಎಂದು ಹೇಳಿದರು.

ಪೌರಕಾರ್ಮಿಕರ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸಬಾರದು. ಅವರು ಪ್ರತಿದಿನ ಕೆಲಸ ಮಾಡದಿದ್ದರೆ ನಮ್ಮ ಸ್ವಚ್ಛ ನಗರವು ಅಸ್ವಚ್ಛ ನಗರವಾಗಿ ಬದಲಾಗುತ್ತದೆ. ಹಾಗಾಗಿ ಪ್ರತಿಯೊಂದು ದಿನವೂ ನಾವು ಅವರ ಸೇವೆ ಸ್ಮರಿಸಬೇಕು ಮತ್ತು ಗೌರವಿಸಬೇಕು ಎಂದರು.

ನಾಗರಿಕರಲ್ಲಿ ಕಸ ವಿಂಗಡಣೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಪೌರಕಾರ್ಮಿಕರು ಕೆಲಸದ ವೇಳೆ ಎದುರಿಸುವ ತೊಂದರೆ ತಪ್ಪಿಸಲು ಸಾರ್ವಜನಿಕರು ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು. ಪೌರಕಾರ್ಮಿಕರ ಹಿತರಕ್ಷಣೆ ಮತ್ತು ಅವರ ಬೆಂಬಲಕ್ಕೆ ಜಿಲ್ಲಾಡಳಿತವು ಯಾವಾಗಲೂ ಸದಾ ಸಿದ್ಧವಾಗಿರುತ್ತದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಮುಬೀನಾ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ಉಪ ಆಯುಕ್ತ ನಂದೀಶ್, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪಿ. ವಿವೇಕ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಹನುಮಂತಪ್ಪ, ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕುಬೇರ, ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಾಗರತ್ನ ಸೇರಿದಂತೆ ಪಾಲಿಕೆಯ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಪಾಲಿಕೆಯ ಇತರೆ ಅಧಿಕಾರಿ-ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.