ಪಠ್ಯ, ಪಠ್ಯೇತರಕ್ಕೂ ಸಮಚಿತ್ತ ಇರಲಿ: ಶಾಸಕ ಚಂದ್ರಪ್ಪ

| Published : Oct 19 2025, 01:00 AM IST

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ ಪಠ್ಯೇತರ ಚಟುವಟಿಕೆ ಉದ್ಘಾಟಿಸಿ ಭರಮಸಿರಿ ಸಂಚಿಕೆ-2 ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಿ ಆರೋಗ್ಯವಂತರಾಗಿರುವಂತೆ ವಿದ್ಯಾರ್ಥಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.

ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ, ಭರಮಸಿರಿ ಸಂಚಿಕೆ-2 ಬಿಡುಗಡೆಗೊಳಿಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಅಧ್ಯಾಪಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಪಡೆಯಬಹುದು. ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರಥಮ ರ್‍ಯಾಂಕ್ ಪಡೆದವರಿಗೆ 50 ಸಾವಿರ ರು. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದೆ. ಅದರಂತೆ ಪ್ರಥಮ ರ್‍ಯಾಂಕ್‌ ಗಳಿಸಿದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯೋರ್ವರಿಗೆ 50 ಸಾವಿರ ರು. ಸ್ವಾತಂತ್ರ್ಯ ದಿನದಂದು ನೀಡಿದೆ. ನಮ್ಮ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಯಾರಾದರೂ ಪ್ರಥಮ ರ್‍ಯಾಂಕ್‌ ಪಡೆದರೆ 1 ಲಕ್ಷ ರು. ನೀಡುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಘೋಷಿಸಿದರು.

1994ರಲ್ಲಿ 10 ಎಕರೆ ಜಾಗ ಖರೀಧಿಸಿ ಈ ಕಾಲೇಜು ಮತ್ತು ಐಟಿಐ ಕಾಲೇಜು ಕಟ್ಟಿಸಿದೆ. ಮಕ್ಕಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಈ ಕಾಲೇಜು ಅತ್ಯುತ್ತಮವಾಗಿದೆ. ಇಲ್ಲಿನ ಬೋಧಕರು ಗುಣಮಟ್ಟದ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಶಿಕ್ಷಣದ ಜೊತೆ ಯೋಗ, ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಕೊಂಡು ಸದೃಢವಾಗಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎನ್‌ಎಸ್‌ಎಸ್ ಎಂದರೆ ಶ್ರಮದಾನ, ಸೇವಾ ಮನೋಭಾವನೆಯುಳ್ಳದ್ದು, ಈ ಕಾಲೇಜಿನ ಎನ್‌ಎಸ್ಎಸ್‌ ಅಧಿಕಾರಿ ಪ್ರಶಸ್ತಿ ಪಡೆದಿರುವುದು ಎಲ್ಲರಿಗೂ ಕೀರ್ತಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಶಿಕಲಾ, ಜಿಪಂ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಲೋಕೇಶ್‍ ನಾಯ್ಕ, ಕಾಲೇಜು ಅಭಿವೃದ್ಧಿ ಸಂಸ್ಥೆ ಸದಸ್ಯರಾದ ಮಂಜುನಾಥ್, ಕಲ್ಲೇಶ್, ಕರಿಯಮ್ಮ, ನಿರ್ಮಲ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.