ಸಾರಾಂಶ
ಚಿತ್ರದುರ್ಗ: ಯಾವುದೇ ವಸ್ತು ಕೊಳ್ಳುವಾಗ ಅದರ ಗುಣಮಟ್ಟ ಖಾತರಿ ಬಗ್ಗೆ ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ್ ಅಭಿಪ್ರಾಯಪಟ್ಟರು. ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ, ಸರಸ್ವತಿ ಕಾನೂನು ಕಾಲೇಜು, ಎಸ್‌ಜೆಎಂ ಕಾನೂನು ಕಾಲೇಜು, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಗ್ರಾಹಕರ ನ್ಯಾಯಕ್ಕಾಗಿ ವರ್ಚುವಲ್ ವಿಚಾರಣೆಗಳು ಮತ್ತು ಡಿಜಿಟಲ್ ಹಾದಿ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಸ್ತುವಿನ ಗುಣಮಟ್ಟ ಹಾಗೂ ಯೋಗ್ಯ ದರದ ಬಗ್ಗೆ ಮೋಸ ಹೋಗದಂತೆ ಗ್ರಾಹಕರು ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದರು. ಯಾವುದೇ ರೀತಿಯಲ್ಲಿ ವಸ್ತುವನ್ನು ಕೊಂಡಾಗ, ಸೇವೆ ಪಡೆಯುವಾಗ ಗ್ರಾಹಕರಿಗೆ ಮೋಸವಾಗಬಾರದು. ಈ ನಿಟ್ಟಿನಲ್ಲಿ ಗ್ರಾಹಕರು ತಮಗೆ ಆದ ಅನ್ಯಾಯದ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ, ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬಳಸಿಕೊಂಡು ತಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಎಂದರು. 1986ರ ಗ್ರಾಹಕರ ಸಂರಕ್ಷಣಾ ಕಾಯ್ದೆಯಲ್ಲಿ 4 ಅಧ್ಯಾಯಗಳು ಹಾಗೂ 31 ಕಲಂಗಳು ಮಾತ್ರ ಇದ್ದವು. ಈಗ 2019ರ ಕಾಯ್ದೆಯಲ್ಲಿ 8 ಅಧ್ಯಾಯಗಳು ಹಾಗೂ 107 ಕಲಂಗಳಿಗೆ ವಿಸ್ತರಿಸಲಾಗಿದೆ. 1986ರ ಗ್ರಾಹಕರ ಸಂರಕ್ಷಣಾ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆ ಬೇಕಿತ್ತು. ಹಾಗಾಗಿ 2019ರಲ್ಲಿ ಹೊಸ ಕಾನೂನು ಅಳವಡಿಸಿಕೊಳ್ಳುವ ಮೂಲಕ ಅಮೂಲಾಗ್ರ ಬದಲಾವಣೆ ಮಾಡಲಾಯಿತು. ಕಳೆದ ಎರಡು-ಮೂರು ದಶಕದಲ್ಲಿ ನಮ್ಮ ಜೀವನಮಟ್ಟದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಾವು ಮೊದಲಿಗಿಂತಲೂ ಹೆಚ್ಚು ಜಾಗೃತರಾಗಿದ್ದೇವೆ ಎಂದು ಹೇಳಿದರು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ದಿನನಿತ್ಯವೂ ಒಂದಲ್ಲ ಒಂದು ವಸ್ತು ಖರೀದಿ ಮಾಡುತ್ತಿರುತ್ತೇವೆ. ಪ್ರತಿಯೊಂದು ವಸ್ತುವಿನ ಖರೀದಿ ಹಿಂದೆ ದುಡಿಮೆಯ ಶ್ರಮ ಇರುತ್ತದೆ. ಈ ಹಿನ್ನಲೆಯಲ್ಲಿ ಯಾವುದೇ ವಸ್ತುವಿನ ಮೌಲ್ಯ ಹಾಗೂ ಗುಣಮಟ್ಟ ಅರಿಯುವುದು ಬಹಳ ಮುಖ್ಯ ಎಂದರು. ಉತ್ಪಾದಕರು ಇಲ್ಲವೆ ಮಾರಾಟಗಾರರಿಂದ ಅನ್ಯಾಯವಾದಾಗ ಗ್ರಾಹಕರ ಪರಿಹಾರ ವೇದಿಕೆಗಳಲ್ಲಿ ವ್ಯಾಜ್ಯ ಹೂಡಿ ಪರಿಹಾರ ಪಡೆದುಕೊಳ್ಳಬೇಕು. ಇದರಿಂದ ಜನರಿಗೆ ಹೆಚ್ಚಿನ ಜಾಗೃತಿ ಮೂಡಲಿದೆ. ಹಾಗಾಗಿ ನಾವು ಗ್ರಾಹಕರು ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್ ಮಾತನಾಡಿ, ಭೂಮಿಯಲ್ಲಿ ವಾಸಮಾಡುವ ಪ್ರತಿಯೊಬ್ಬರು ಸಹ ಗ್ರಾಹಕರೇ. ಯಾವುದೇ ವಸ್ತು, ಸೇವೆಯನ್ನು ಹಣ ಕೊಟ್ಟು ನಾವು ಪಡೆದಾಗ ಗ್ರಾಹಕರಾಗುತ್ತೇವೆ. ಆ ಸೇವೆ, ವಸ್ತುವಿಗೆ ಸೂಕ್ತವಾದ ಬೆಲೆ, ಸಮರ್ಪಕ ಸೇವೆ ದೊರೆತಾಗ ಮಾತ್ರ ಗ್ರಾಹಕರು ತೃಪ್ತರಾಗುತ್ತಾರೆ. ಪ್ರಸ್ತುತ ದಿನಗಳಲ್ಲಿ ಸಾಂಪ್ರದಾಯಿಕ ವ್ಯಾಪಾರ ಪದ್ಧತಿಯಿಂದ ಆನ್‍ಲೈನ್ ವ್ಯಾಪಾರ ವ್ಯವಸ್ಥೆಗೆ ಬಂದಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಕೊಡುವ ಹಣಕ್ಕೆ ಸೂಕ್ತ ನ್ಯಾಯ ಸಿಗುತ್ತಿದೆಯೋ, ಇಲ್ಲವೋ ಎಂಬುದನ್ನು ಆಲೋಚಿಸಬೇಕಿದೆ ಎಂದರು. ಉಪಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ಮೂರ್ತಿ ಗ್ರಾಹಕರ ಸಂರಕ್ಷಣಾ ಕಾಯ್ದೆ ವಿಷಯದ ಕುರಿತು ಉಪನ್ಯಾಸ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಅನಿಲ್ ಕುಮಾರ್, ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಎಂ.ಎಚ್.ಸುಧಾದೇವಿ, ಎಸ್‌ಜೆಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ದಿನೇಶ್, ಕಾನೂನು ಮಾಪನಾಶಾಸ್ತ್ರ ಸಹಾಯಕ ನಿಯಂತ್ರಕ ವೆಂಕಟೇಶ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಇದ್ದರು.