ಸಾರಾಂಶ
ರಾಯಚೂರು ಜಿಪಂ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರಕ್ಕೆ ನ್ಯಾಯಾಧೀಶರಾದ ಬಿ.ಎ.ಪಾಟೀಲ್ ಅವರು ಚಾಲನೆ ನೀಡಿ, ಮಾತನಾಡಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಸರ್ಕಾರಿ ಭೂಮಿ ಒತ್ತುವರಿ ತಡೆಯಲು ಗ್ರಾಮ ಲೆಕ್ಕಾಧಿಕಾರಿಗಳು ಮನಸ್ಸು ಮಾಡಿದರೆ ಮಾತ್ರ ಸರ್ಕಾರಿ ಭೂಮಿ ರಕ್ಷಣೆ ಮಾಡಬಹುದಾಗಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎ.ಪಾಟೀಲ್ ಅವರು ಹೇಳಿದರು.ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಕಂದಾಯ ಇಲಾಖೆಯು ಎಲ್ಲಾ ಇಲಾಖೆಗಳ ಮಾತೃ ಇಲಾಖೆಯಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರ ಪಾತ್ರ ಮಹತ್ವದಾಗಿದ್ದು, ಅವರು ಮನಸ್ಸು ಮಾಡಿದರೆ ಮಾತ್ರ ಸರ್ಕಾರದ ಭೂಮಿ ರಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾರುತಿ ಎಸ್.ಭಗಡೆ ಅವರು ಮಾತನಾಡಿ, ರಾಯಚೂರು ನಗರದ ಮಾವಿನಕೆರೆ ಭೂಮಿ ಒತ್ತುವರಿ ಕುರಿತು ನ್ಯಾಯಲಯವು ನಿರ್ದೇಶನ ನೀಡಿದ್ದು, ಕೂಡಲೇ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಿ, ಒತ್ತುವರಿಯಾದ ಭೂಮಿಯನ್ನು ವಶ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಕೆ.ನಿತೀಶ್ ಮಾತನಾಡಿದರು. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಕೆ.ಎಚ್.ಅಶ್ವತ್ಥ ನಾರಾಯಣಗೌಡ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ವಿಲೇಖನಾಧಿಕಾರಿ ಎಚ್.ಕೆ.ನವೀನ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಎಚ್.ಎ.ಸ್ವಾತಿಕ್, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತ ಗಜಾನನ ಬಾಲೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವುಕುಮಾರ್ ಆರ್. ಸೇರಿದಂತೆ ಇತರರು ಇದ್ದರು. ಕಾರ್ಯಾಗಾರದಲ್ಲಿ 12 ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.