ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲಮುಡಾ ಅಭಿವೃದ್ಧಿ ಕಾಮಗಾರಿಗಳಲ್ಲಿ ಮೂಲ್ಕಿಯಿಂದ ತಲಪಾಡಿ ವರೆಗೆ ಬೀಚ್ ರಸ್ತೆ ನಿರ್ಮಿಸುವ ದೊಡ್ಡ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.ಅವರು ತೊಕ್ಕೊಟ್ಟು ಸೇವಾಸೌಧದಲ್ಲಿರುವ ಪ್ರೆಸ್ ಕ್ಲಬ್ ಉಳ್ಳಾಲ ಆಯೋಜಿಸಿದ್ದ ತಿಂಗಳ ಬೆಳಕು ಗೌರವ ಅತಿಥಿ ಹಾಗೂ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮುಡಾದಲ್ಲಿ ಭಯದ ವಾತಾವರಣವಿಲ್ಲ. ಮೈಸೂರಿನಲ್ಲಿ ಆಗಿರುವುದಕ್ಕೆ ಮಂಗಳೂರಿನ ಮುಡಾ ನಂಟು ಮಾಡುವುದು ಸಮಂಜಸವಲ್ಲ. ಅಧಿಕಾರಿಯೊಬ್ಬರು ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದಿರುವುದರ ಬಗ್ಗೆ ವಿಷಾದವಿದೆ. ಮಾಡಿದ ತಪ್ಪಿಗೆ ಅಧಿಕಾರಿ ಮನೆಯಲ್ಲಿದ್ದಾರೆ ಎಂದರು.೨೯ ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ. ಸೋಮೇಶ್ವರ ಕೆರೆಗೆ ಫೌಂಟೇನ್ ಅಳವಡಿಸುವ ಕುರಿತು ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಉಳ್ಳಾಲ ಬೀಚ್ ಅಬ್ಬಕ್ಕ ವೃತ್ತದ ಎದುರು ಭಾಗದಲ್ಲಿ ಪಾರ್ಕ್ ನಿರ್ಮಾಣಕ್ಕೂ ವಿಧಾನಸಭಾ ಅಧ್ಯಕ್ಷ ಯು.ಟಿ .ಖಾದರ್ ಆದೇಶಿಸಿದ್ದಾರೆ ಎಂದರು.
ಕೊಣಾಜೆಯಲ್ಲಿ ಲೇಔಟ್ ನಿರ್ಮಿಸಲಾಗಿದ್ದು ೧೪೬ ನಿವೇಶನಗಳನ್ನು ಕೊಡುವ ವ್ಯವಸ್ಥೆ ಆಗುತ್ತಿದೆ. ಕುಂಜತ್ತಬೈಲ್ ೧೪೯ ಸೈಟ್ ನಿರ್ಮಾಣ, ಚೇಳೂರಿನಲ್ಲಿ ೭೦೦ ಸೈಟ್ ನಿರ್ಮಾಣದ ಯೋಜನೆಯಿದೆ. ಮಧ್ಯವರ್ತಿಗಳಿಂದ ಮುಡಾ ಅಧಿಕಾರಿಗಳ ಹೆಸರು ಹಾಳಾಗುತ್ತಿವೆ. ಗ್ರಾಮಾಂತರ ಭಾಗದ ೯-೧೧ ಕೆಲಸ ಮುಡಾ ವ್ಯಾಪ್ತಿಗೆ ಬರುತ್ತವೆ ಅನ್ನುವ ತಪ್ಪು ಸಂದೇಶವಿದೆ. ಗ್ರಾಮಾಂತರ ಯೋಜಾನ ಪ್ರಾಧಿಕಾರ ಅನ್ನುವುದು ಬೇರೆಯೇ ಇದೆ, ಅದು ಮುಡಾ ಕಚೇರಿಯಲ್ಲಿ ಬಾಡಿಗೆ ಕಚೇರಿಯನ್ನಷ್ಟೇ ಹೊಂದಿದೆ. ಅದರ ಕಾರ್ಯಚಟುವಟಿಕೆಗಳೇ ಬೇರೆ ಎಂದು ತಿಳಿಸಿದರು.ಉದ್ಯಮಿ ಹಾಗೂ ಮಹೇಶ್ ಬಸ್ ಸ್ಥಾಪಕ ಜಯರಾಮ್ ಶೇಖ ಮಾತನಾಡಿ, ಇಡೀ ಭಾರತದಲ್ಲಿ ಪ್ರಥಮ ಖಾಸಗಿ ಬಸ್ ಹಾಕಿದವರು ಮಂಗಳೂರಿಗರು. ಇಂದಿಗೆ ಮಂಗಳೂರಿನ ಖಾಸಗಿ ಬಸ್ ಕ್ಷೇತ್ರಕ್ಕೆ ೧೧೦ ವರ್ಷಗಳು ಸಂದುತ್ತವೆ. ಇದು ಚರಿತ್ರೆ ಎಂದರು.
ಪತ್ರಿಕಾ ದಿನದ ಅಂಗವಾಗಿ ಹಿರಿಯ ಪತ್ರಿಕಾ ವಿತರಕ ಇಸ್ಮಾಯಿಲ್ ದೇರಳಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಗೌರವ ಅತಿಥಿ ಸದಾಶಿವ ಉಳ್ಳಾಲ್ ಹಾಗೂ ಉದ್ಘಾಟಕರಾಗಿ ಆಗಮಿಸಿದ್ದ ಉದ್ಯಮಿ ಜಯರಾಮ ಶೇಖ ಅವರನ್ನು ಅಭಿನಂದಿಸಲಾಯಿತು.ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್. ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಆಸೀಫ್ ಬಬ್ಬುಕಟ್ಟೆ, ರಜನೀಕಾಂತ್, ಪತ್ರಕರ್ತರಾದ ಸುಶ್ಮಿತಾ , ಗಂಗಾಧರ್ ಉಪಸ್ಥಿತರಿದ್ದರು.ಸತೀಶ್ ಕೊಣಾಜೆ ನಿರೂಪಿಸಿದರು. ದಿನೇಶ್ ನಾಯಕ್ ಸ್ವಾಗತಿಸಿದರು. ಮೋಹನ್ ಕುತ್ತಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರೀಫ್ ಯು.ಆರ್., ಬಶೀರ್ ಕಲ್ಕಟ್ಟ ಹಾಗೂ ವಜ್ರ ಗುಜರನ್ ಅತಿಥಿಗಳ ಪರಿಚಯ ಮಾಡಿದರು. ಶಿವಶಂಕರ್ ವಂದಿಸಿದರು.