ಕರಡಿ ದಾಳಿ: ಚಿಕಿತ್ಸೆ ಫಲಸದೇ ಓಂಕಾರಪ್ಪ ಸಾವು

| Published : Aug 16 2024, 12:58 AM IST

ಸಾರಾಂಶ

ತಾಲೂಕಿನ ತಳಕು ಹೋಬಳಿಯ ಸಿರಿವಾಳ ಓಬಳಾಪುರ ಗ್ರಾಮದ ಹೊರವಲಯದಲ್ಲಿ ಎಮ್ಮೆ ಮೇಯಿಸುವ ಸಂದರ್ಭದಲ್ಲಿ ಕರಡಿದಾಳಿಗೆ ತುತ್ತಾಗಿ ರಕ್ತಗಾಯಗೊಂಡು ಚಳ್ಳಕೆರೆ, ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಓಂಕಾರಪ್ಪ(65) ಎಂಬ ರೈತ ಚಿಕಿತ್ಸೆ ಫಲಸದೇ ಗುರುವಾರ ಬೆಳಗಿನಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಜುಲೈ 29ರ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ದಾಳಿ ಸಂದರ್ಭದಲ್ಲಿ ಓಂಕಾರಪ್ಪ ಕರಡಿಯೊಂದಿಗೆ ಸಾಕಷ್ಟು ಹೋರಾಟ ನಡೆಸಿದ್ದರು. ಆಗ ಅಲ್ಲಿಗೆ ಬಂದ ಕೆಲ ಗ್ರಾಮಸ್ಥರ ಕರಡಿಯನ್ನು ಓಡಿಸಿದ್ದರು. ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಓಂಕಾರಪ್ಪನ ಚಿಕಿತ್ಸೆ ವೆಚ್ಚವನ್ನು ಇಲಾಖೆ ಬರಿಸುವುದಾಗಿ ಹಿರಿಯೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ತಿಳಿಸಿದ್ದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಗಾಯಾಳಿಗೆ 5 ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಇದ್ದು, ಮೃತಪಟ್ಟರೆ 15 ಲಕ್ಷ ಹಣವನ್ನು ಅವರ ಕುಟುಂಬಕ್ಕೆ ನೀಡಲಾಗುವುದು. ಅಲ್ಲದೇ ಸುಮಾರು ನಾಲ್ಕು ವರ್ಷಗಳ ಕಾಲ ಮಾಹೆಯಾನ ₹4000 ಅವರ ವಾರಸುದಾರರಿಗೆ ನೀಡಲಾಗುವುದು. ಈ ಘಟನೆ ನಂತರ ಆ ಭಾಗದಲ್ಲಿ ಮತ್ತೆ ಎಲ್ಲೂ ಕರಡಿ ಕಾಣಿಸಿಕೊಂಡಿಲ್ಲವೆಂದು ತಿಳಿಸಿದ್ದಾರೆ. ಮೃತ ಓಂಕಾರಪ್ಪನ ಕುಟುಂಬಕ್ಕೆ ಶೀಘ್ರದಲ್ಲೇ ಸರ್ಕಾರ ಪರಿಹಾರ ಹಣ ₹15 ಲಕ್ಷ ನೀಡಲಾಗುವುದು ಎಂದರು.

ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಟಿ. ರಾಜಣ್ಣ, ವಲಯ ಅರಣ್ಯಾಧಿಕಾರಿ ಎಸ್.ವಿ.ಮಂಜುನಾಥ, ರಾಜೇಶ್, ವಿ.ವಸಂತಕುಮಾರ್ ಭೇಟಿ ನೀಡಿದ್ದರು.