ಕರಡಿ ದಾಳಿ: ಯುವಕನಿಗೆ ಗಂಭೀರ ಗಾಯ

| Published : Jun 11 2024, 01:39 AM IST

ಸಾರಾಂಶ

ಹೊಸದುರ್ಗ ತಾಲೂಕಿನ ಯಾಲಕ್ಕಪ್ಪನಹಟ್ಟಿ ಸಮೀಪದ ಜಮೀನಿನಲ್ಲಿ ಕರಡಿ ದಾಳಿಗೊಳಗಾದ ದಿನೇಶ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಜಮೀನಿಗೆ ತೆರಳಿದ್ದ ಯುವಕನ ಮೇಲೆ ಕರಡಿ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ತಾಲೂಕಿನ ಯಾಲಕ್ಕಪ್ಪನಹಟ್ಟಿ ಸಮೀಪದ ಸಿದ್ದಪ್ಪನಬೆಟ್ಟದ ಬಳಿಯಿರುವ ಜಮೀನಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಕರಡಿ ದಾಳಿಗೆ ಒಳಗಾದವನನ್ನು ಹೇರೂರು ಮೂಲದ ದಿನೇಶ್ ಎಂದು ಗುರುತಿಸಲಾಗಿದೆ.

ಹೇರೂರು ಮೂಲದ ದಿನೇಶ್ ಯಾಲಕ್ಕಪ್ಪನಹಟ್ಟಿ ಗ್ರಾಮದಲ್ಲಿ ಕಳೆದ 6 ವರ್ಷಗಳಿಂದ ವಾಸವಾಗಿದ್ದಾರೆ. ಎಂದಿನಂತೆ ತೋಟಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಕದ ಜಮೀನಿನಲ್ಲಿದ್ದ ವ್ಯಕ್ತಿಯೊಬ್ಬರು ಕರಡಿಗಳನ್ನು ಅಲ್ಲಿಂದ ಓಡಿಸಿ ದಿನೇಶ್‌ನನ್ನು ಹೆಚ್ಚಿನ ಅಪಾಯದಿಂದ ಪಾರು ಮಾಡಿದ್ದಾರೆ.

ದಿನೇಶ್ ಬೆಳಗ್ಗೆ 7 ಗಂಟೆ ಸಮಯದಲ್ಲಿ ಸಿದ್ದಪ್ಪನಬೆಟ್ಟ ಸಮೀಪದಲ್ಲಿನ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿವೆ. ಕರಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕರಡಿ ಕೈ ಮತ್ತು ದೇಹದ ಇತರೆ ಭಾಗದಲ್ಲಿ ಕಚ್ಚಿದ ಪರಿಣಾಮ ಮಾರಣಾಂತಿಕ ಹಲ್ಲೆಗಳಾಗಿವೆ. ವಿಷಯ ತಿಳಿದು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಯಾಲಕ್ಕಪ್ಪನಹಟ್ಟಿ ಗ್ರಾಮಸ್ಥರು ದಿನೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಮುಖ, ಕಣ್ಣು, ಕಿವಿ, ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸ್ವಸ್ತಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹೆಚ್ಚುತ್ತಿರುವ ಕರಡಿ ಹಾವಳಿ: ಹೊಸದುರ್ಗ ತಾಲೂಕಿನಲ್ಲಿ ದಿನೇ ದಿನೇ ಕರಡಿಗಳ ಉಪಟಳ ಹೆಚ್ಚಾಗುತ್ತಿದ್ದು, ಗುಡ್ಡಕ್ಕೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ಹಾಡು ಹಗಲೇ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿವೆ. ಪಟ್ಟಣದ ಕುಂಚಿಟಿಗ ಮಠ ಆವರಣದಲ್ಲಿ ಪ್ರತಿನಿತ್ಯ ರಾತ್ರಿ 8 ಗಂಟೆ ಸಮಯದಲ್ಲಿ ಕರಡಿ ಪ್ರತ್ಯಕ್ಷಗೊಳ್ಳುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆಹಾರ ಕೊರತೆಯೇ ಕಾರಣ:

ಕರಡಿಗಳು ನಗರ ಹಾಗೂ ಗ್ರಾಮಗಳತ್ತ ವಲಸೆ ಬರಲು ಬರ ಮೂಲ ಕಾರಣವಾಗಿದೆ. ಕಳೆದ ವರ್ಷದಿಂದ ಏಪ್ರಿಲ್ ತಿಂಗಳವರೆಗೂ ಬರಗಾಲ ಆವರಿಸಿತ್ತು. ಮಳೆ ಇಲ್ಲದೇ ಕುಡಿಯಲು ನೀರಿನ ಕೊರತೆ ಎದುರಾಗಿ ನಗರ ಪ್ರದೇಶಗಳು, ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕರಡಿಗಳು ಕಾಡಂಚಿನಲ್ಲಿ ವಾಸಿಸಲು ಶುರು ಮಾಡಿದ ಮೇಲೆ ನಿತ್ಯ ಹೊಲಗಳತ್ತ ಬರುವುದು ಅಭ್ಯಾಸವಾಗಿ ಮುಂದುವರೆದಿದೆ. ಹೀಗಾಗಿ ಕಾಡು ಪ್ರದೇಶಗಳಲ್ಲಿ ಕರಡಿಗಳ ಪ್ರಮುಖ ಆಹಾರವಾದ ಸೀತಾಫಲ ಹಣ್ಣು ಹೆಚ್ಚಾಗಿ ಬೆಳೆಸಬೇಕು. ಕರಡಿ ಹಿಡಿದು ಬೇರೆಡೆ ಸಾಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.