ಕರಡಿ, ಚಿರತೆ ಹಾವಳಿ: ಗ್ರಾಮಸ್ಥರಿಂದ ಗಸ್ತು

| Published : May 01 2025, 12:46 AM IST

ಕರಡಿ, ಚಿರತೆ ಹಾವಳಿ: ಗ್ರಾಮಸ್ಥರಿಂದ ಗಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಹಗಲಿನಲ್ಲಿ ಹೊಲಕ್ಕೆ ಒಬ್ಬಂಟಿಯಾಗಿ ಹೋಗದೆ ತಂಡ-ತಂಡವಾಗಿ ಹೋಗುತ್ತಿದ್ದಾರೆ. ಗ್ರಾಮದ ಹೊರವಲಯದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತು ಹಾಗೂ ಅಲ್ಲಲ್ಲಿ ಕಾಣಿಸಿಕೊಂಡಿದೆ ಎನ್ನುವ ವದಂತಿಯಿಂದ ಬೆಚ್ಚಿಬಿದ್ದಿರುವ ಜನತೆ ತಾವೇ ಉಪಾಯ ಕಂಡುಕೊಂಡು ಗಸ್ತು ತಿರುಗುತ್ತಿದ್ದಾರೆ.

ಕೊಪ್ಪಳ:

ತಾಲೂಕಿನ ಕಾಸನಕಂಡಿ ಗ್ರಾಮದ ಅರಣ್ಯ ಪ್ರದೇಶ ಸೇರಿದಂತೆ ಹೊಲಗಳಲ್ಲಿ ಕರಡಿ ಮತ್ತು ಚಿರತೆ ಹಾವಳಿಯಿಂದ ಭಯಭೀತರಾಗಿರುವ ಗ್ರಾಮಸ್ಥರು ರಾತ್ರಿಯಿಡಿ ಪಂಜರ ಹಿಡಿದು ಗಸ್ತು ತಿರುಗುತ್ತಿದ್ದಾರೆ.

ಹಗಲಿನಲ್ಲಿ ಹೊಲಕ್ಕೆ ಒಬ್ಬಂಟಿಯಾಗಿ ಹೋಗದೆ ತಂಡ-ತಂಡವಾಗಿ ಹೋಗುತ್ತಿದ್ದಾರೆ. ಗ್ರಾಮದ ಹೊರವಲಯದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತು ಅಲ್ಲಲ್ಲಿ ಕಾಣಿಸಿಕೊಂಡಿದೆ ಎನ್ನುವ ವದಂತಿಯಿಂದ ಬೆಚ್ಚಿಬಿದ್ದಿರುವ ಜನತೆ ತಾವೇ ಉಪಾಯ ಕಂಡುಕೊಂಡು ಗಸ್ತು ತಿರುಗುತ್ತಿದ್ದಾರೆ.

ಯಾಕೇ ಆತಂಕ?:

ಗ್ರಾಮದ ಹೊರವಲಯದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು, ಈ ಪೈಕಿ ಒಂದನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಕಾಸನಕಂಡಿ ಅರಣ್ಯ ಪ್ರದೇಶದಲ್ಲಿಯೇ ಇನ್ನೊಂದು ಚಿರತೆ ಇದೆ ಎನ್ನುವುದು ಗ್ರಾಮಸ್ಥರ ಆತಂಕ. ಇದರ ಜತೆಗೆ ಕರಡಿಗಳು ಕಾಣಿಸಿಕೊಂಡಿವೆ ಎಂದು ಹೇಳುತ್ತಾರೆ. ಗ್ರಾಮದ ಯುವಕ ಮೊಬೈಲ್‌ನಲ್ಲಿ ಸೆರೆಹಿಡಿರುವ ವೀಡಿಯೋದಲ್ಲಿ ಕರಡಿ ಸುತ್ತಾಡಿರುವುದು (ಸರಿಯಾಗಿ ಕಾಣಿಸುತ್ತಿಲ್ಲ) ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಹೀಗಾಗಿ, ಗ್ರಾಮಸ್ಥರು ಹೊಲದಲ್ಲಿ ಹಾಕಿರುವ ಬೆಳೆ ಕಾಪಾಡಿಕೊಳ್ಳಲು ಮತ್ತು ನೀರು ಕಟ್ಟಲು ಈಗ ಪ್ರತ್ಯೇಕವಾಗಿ ಹೋಗುತ್ತಿಲ್ಲ. ಬದಲಾಗಿ ಗುಂಪುಗಳನ್ನು ರಚಿಸಿಕೊಂಡಿದ್ದು. ರಾತ್ರಿ ಬೆಂಕಿಯ ಪಂಚ ಹಿಡಿದು ಹೊಲಗಳಿಗೆ ಸಾಗುತ್ತಾರೆ. ಹೀಗೆ ಗುಂಪಾಗಿ ಹೋಗಿಯೇ ತಮ್ಮ ಹೊಲದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.

ತುಂಗಭದ್ರಾ ಹಿನ್ನೀರು ಪ್ರದೇಶವಾಗಿದೆ. ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಹಾಕಿದ್ದು, ಅದು ಸಹ ಆಳೆತ್ತರ ಬೆಳೆದಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಸುತ್ತಾಡುವುದಕ್ಕೂ ಭಯಪಡುವಂತೆ ಆಗಿದೆ.

ಕಾಸನಕಂಡಿ ಗ್ರಾಮದ ವ್ಯಾಪ್ತಿಯಲ್ಲಿ ಕರಡಿ ಮತ್ತು ಚಿರತೆಗಳು ಇದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈಗಾಗಲೇ ಒಂದು ಚಿರತೆ ಹಿಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಇರುವ ಮತ್ತೊಂದು ಚಿರತೆಯನ್ನು ಪತ್ತೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಆಗ್ರಹವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈಗಾಗಲೇ ಇರುವ ಒಂದು ಚಿರತೆ ಹಿಡಿದಿದ್ದೇವೆ. ಮತ್ತೊಂದು ಕಾಣಿಸಿಕೊಂಡರೆ ಖಂಡಿತ ಹಿಡಿಯುತ್ತೇವೆ ಎಂದು ಹೇಳುತ್ತಿದ್ದಾರೆಯೇ ಹೊರತು ಹಿಡಿಯಲು ಬರುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.