ಸಾರಾಂಶ
- ಕರಡಿ ಸೆರೆ ಹಿಡಿಯಲು ಬೋನ್ ಇರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು - - - ಕನ್ನಡ ಪ್ರಭ ವಾರ್ತೆ, ಹೊನ್ನಾಳಿ
ಕೆಲವು ದಿನಗಳಿಂದ ಹೊನ್ನಾಳಿ ತಾಲೂಕು ಹೊಸ ದೇವರಹೊನ್ನಾಳಿ ಗ್ರಾಮ ವ್ಯಾಪ್ತಿಯ ತೋಟ, ಜಮೀನುಗಳಲ್ಲಿ ಕರಡಿ ತಿರುಗಾಡುತ್ತಿದ್ದು, ಬೆಳೆಗಳನ್ನು ಬೆಳೆದ ರೈತರು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಭೀಕರ ಬಿಸಿಲು, ಬರಗಾಲದ ಪರಿಸ್ಥಿತಿಯಿಂದ ಆಹಾರ, ನೀರು ಅರಸಿ ಕಾಡು ಪ್ರಾಣಿಗಳು ಗ್ರಾಮಗಳ ಸಮೀಪಕ್ಕೆ ಬರುತ್ತಿವೆ. ಚನ್ನಗಿರಿ ತಾಲೂಕು ದಾಗಿನಕಟ್ಟೆ ಗುಡ್ಡಗಾಡಿನಿಂದ ಹೊನ್ನಾಳಿ ತಾಲೂಕಿನ ಗ್ರಾಮಗಳ ಜಮೀನು, ಅಡಕೆ ತೋಟಗಳ ಮೂಲಕ ಕರಡಿಗಳು ಆಗಮಿಸಿವೆ. ಹೊಲ-ಗದ್ದೆಗಳಲ್ಲಿ ತಿರುಗಾಡುತ್ತಿವೆ. ರಾತ್ರಿವೇಳೆ ಕಳೆಗಿಡಗಳಿಂದ ಸುತ್ತುವರಿದು ಪೊದೆಯಂತಿರುವ ಬೀರಪ್ಪ ದೇವರ ಗುಡಿಯಲ್ಲಿ ಆಶ್ರಯ ಪಡೆಯುತ್ತಿವೆ. ಇದರಿಂದ ಈ ಭಾಗದ ರೈತರು, ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.
ಬೋನ್ ಅಳವಡಿಕೆ- ಸಿಬ್ಬಂದಿ ನಿಯೋಜನೆ:ಕರಡಿಯ ಗ್ರಾಮದ ಬಳಿ ಸಂಚಿಸುರುದನ್ನು ಪ್ರತ್ಯಕ್ಷವಾಗಿ ಕಂಡ ಕೆಲ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಸಿಬ್ಬಂದಿ ಕರಡಿ ತಿರುಗಾಡುತ್ತಿದ್ದ ಹೊಸ ದೇವರಹೊನ್ನಾಳಿ ಪ್ರದೇಶಕ್ಕೆ ಅಗಮಿಸಿ, ಪರಿಶೀಲಿಸಿದರು. ಬಳಿಕ ಕರಡಿ ಇರುವ ಬಗ್ಗೆ ಹೊನ್ನಾಳಿ ವಲಯ ಅರಣ್ಯಾಧಿಕಾರಿ ಶಿವಯೋಗಿ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕರಡಿ ಸೆರೆಹಿಡಿಯಲು ಬೋನ್ ಇರಿಸಿ, ಗಮನಿಸಲು ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ.
ಅಧಿಕಾರಿಗಳು ಬೋನ್ ಅಳವಡಿಸಿದ್ದು, ಈ ಸಂದರ್ಭ ಹೊನ್ನಾಳಿ ತಾಲೂಕು ಅರಣ್ಯಾಧಿಕಾರಿ ಶಿವಕುಮಾರ್ ಮತ್ತು ವಾಚರ್‌ಗಳಾದ ರಮೇಶಪ್ಪ, ಗಾಳ್ಯಪ್ಪ ಮತ್ತು ಚನ್ನಗಿರಿ ತಾಲೂಕು ಮಾವಿನಕಟ್ಟೆ ಅರಣ್ಯಾಧಿಕಾರಿ ಜಗದೀಶ್, ವಾಚರ್ ನಾಗರಾಜ್, ಗ್ರಾಪಂ ಸದಸ್ಯ ರಾಜಪ್ಪ, ಗ್ರಾಮದ ಮುಖಂಡರಾದ ಗುರುದೇವ್, ಮಂಜುನಾಥ, ಕುಮಾರ್, ರಮೇಶ್, ಪಾಂಡುರಂಗ, ಕೃಷ್ಣ, ಗೋಪಿನಾಥ್ ಸ್ಥಳದಲ್ಲಿ ಹಾಜರಿದ್ದರು.- - -
ಬಾಕ್ಸ್ ಮೊಬೈಲ್‌ಗಳಲ್ಲಿ ಸೆರೆಯಾದ ಕರಡಿ ಹೊಸ ದೇವರಹೊನ್ನಾಳಿ ಬಸ್ ನಿಲ್ದಾಣ ಸಮೀಪ ಪಾಳುಬಿದ್ದ ಕಲ್ಲಿನ ಶ್ರೀ ಬೀರಪ್ಪ ದೇವರ ಗುಡಿ ಗಿಡ, ಬಳ್ಳಿ, ಪೊದೆಗಳಿಂದ ಸುತ್ತುವರಿದು ಗುಹೆಯಂತಾಗಿದೆ. ಹಲವಾರು ದಿನಗಳಿಂದ ಈ ಪ್ರದೇಶದಲ್ಲಿ ಕರಡಿಗಳ ಸಂಚಾರವಿದೆ. ಸ್ಥಳೀಯ ಹಾಲು ಮಾರುವವರು, ಪಾದಚಾರಿಗಳು, ನೀರು ಪೂರೈಕೆಯ ಬೋರ್‌ವೆಲ್ ಆನ್ ಮಾಡಲು ಬರುವ ನೀರಗಂಟಿ ತಿಮ್ಮಪ್ಪ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸುವ ಬೀರಪ್ಪ ದೇವರ ಭಕ್ತ ಹಾಲೇಶ್, ತೋಟದ ಮಾಲೀಕ ದೇವರಹೊನ್ನಾಳಿ ರಮೇಶ್ ಕರಡಿ ಇರುವುದನ್ನು ಖಚಿತ ಪಡಿಸಿದ್ದಾರೆ. ಭಾನುವಾರ ಪೊದೆಯಲ್ಲಿ ಅಡಗಿದ್ದ ಕರಡಿಯನ್ನು ಗ್ರಾಮಸ್ಥರು ನೋಡಿ, ಗ್ರಾಮದ ಜನರಿಗೆ ಮಾಹಿತಿ ನೀಡಿದ್ದಾರೆ. ತೋಟದಲ್ಲಿ ಕರಡಿ ತಿರುಗಾಡುತ್ತಿದ್ದ ದೃಶ್ಯಗಳನ್ನು ಕೆಲವರು ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ.- - - -27ಎಚ್ಎಲ್ಐ1: ಹೊಸ ದೇವರಹೊನ್ನಾಳಿ ವ್ಯಾಪ್ತಿ ಜಮೀನು, ತೋಟಗಳಲ್ಲಿ ತಿರುಗಾಡುತ್ತಿರುವ ಕರಡಿ.
-27ಎಚ್.ಎಲ್.ಐ1ಬಿ: ಕರಡಿ ಸೆರೆಗಾಗಿ ಅರಣ್ಯ ಇಲಾಖೆಯವರು ಬೋನ್ ಅಳವಡಿಸಿರುವುದು.