ಆಹಾರ ಹರಿಸಿ ನಾಡಿಗೆ ಕರಡಿ: ಆತಂಕ

| Published : May 20 2025, 01:08 AM IST

ಸಾರಾಂಶ

ತುಮಕೂರ್ಲಹಳ್ಳಿ ಗೌಡ್ರ ಕಪಿಲೆ ಸಮೀಪದಲ್ಲಿ ಪ್ರತ್ಯಕ್ಷ । ಕಾಡಿಗೆ ಕಳುಹಿಸುವಲ್ಲಿ ಅಧಿಕಾರಿಗಳು ಯಶಸ್ವಿ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಆಹಾರ ಹರಸಿ ಹಾಡು ಹಗಲೇ ನಾಡಿಗೆ ಬಂದು ಜನರನ್ನು ಆತಂಕ ಗೊಳಿಸಿದ್ದ ಕರಡಿಯನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿರುವ ಘಟನೆ ತಾಲೂಕಿನ ಯರೇನಹಳ್ಳಿ ಸಮೀಪದಲ್ಲಿ ಸೋಮವಾರ ನಡೆದಿದೆ.

ತಾಲೂಕಿನ ಕಸಬಾ ಹೋಬಳಿಯ ತುಮಕೂರ್ಲಹಳ್ಳಿ ಗೌಡ್ರ ಕಪಿಲೆ ಸಮೀಪದಲ್ಲಿ ಪ್ರತ್ಯಕ್ಷವಾಗಿದ್ದ ಕರಡಿಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಕರಡಿಯನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಯರೇನಹಳ್ಳಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು ಬಳಸಿಕೊಂಡು ಸಿದ್ದಯ್ಯನ ಕೋಟೆ ಮಾರ್ಗವಾಗಿ ತುಪ್ಪದಕ್ಕನಹಳ್ಳಿಯಿಂದ ಹಾನಗಲ್ ಸಮೀಪದಿಂದ ಸಾಗಿ ಅಲ್ಲಿನ ಅರಣ್ಯ ಪ್ರದೇಶ ಗುಡ್ಡಕ್ಕೆ ಸೇರಿಸಿದ್ದಾರೆ. ಈ ವೇಳೆ ಸೇರಿದ್ದ ನೂರಾರು ಜನರಿಗೆ ಗದ್ದಲ ಮಾಡದಂತೆ ಸೂಚಿಸಿದರೂ ಫಲಕಾರಿಯಾಗಲಿಲ್ಲ. ಇದರಿಂದ ಬಾರಿ ಗದ್ದಲ ಏರ್ಪಟ್ಟಿತ್ತು.

ಸ್ಥಳೀಯರೊಟ್ಟಿಗೆ ಅರಣ್ಯ ಅಧಿಕಾರಿಗಳು ಕೈಗೊಂಡ ಕರಡಿ ಓಡಿಸುವ ಕೆಲಸ ಬೆಳಗ್ಗೆ 7 ರಿಂದ ಆರಂಭಗೊಂಡ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಗೊಂಡಿತು ಹಾಗೂ ಕರಡಿ ಓಡಿಸಲು ಬೈಕ್‌ಗಳೊಂದಿಗೆ ನೂರಾರು ಮಂದಿ ಬಾರಿ ಗದ್ದಲ ನಡೆಸಿದರು. ಈ ವೇಳೆ ಆಕ್ರೋಶಗೊಂಡ ಕರಡಿ ಅಲ್ಲಿದ್ದ ಇಬ್ಬರ ಮೇಲೆ ಎರಗಿದೆ. ಈ ವೇಳೆ ಅವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ ಎನ್ನಲಾಗಿದೆ.

ಕರಡಿ ಓಡುವ ವಿಡಿಯೋ ಹಾಗೂ ಚಿತ್ರಗಳನ್ನು ಮೊಬೈಲ್ ಗಳಲ್ಲಿ ಸೆರೆ ಹಿಡಿಯಲು ಕೆಲವರು ಕರಡಿಯ ಸಮೀಪಕ್ಕೆ ಹೋಗುತ್ತಿರುವುದು ಕಂಡುಬಂತು.

ಜನರನ್ನು ತಡೆಯುವಲ್ಲಿ ಅಧಿಕಾರಿಗಳು ಹರಸಾಹಸ ಪಡುವಂತಾಗಿತ್ತು. ಸುದೀರ್ಘ 8 ಗಂಟೆಗಳ ಕಾರ್ಯಾಚರಣೆಯ ನಂತರ ಕರಡಿ ಗುಡ್ಡ ಸೇರಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಕರಡಿ ದಾಮಕ್ಕೆ ಅಂಟಿಕೊಂಡಂತಿರುವ ತಾಲೂಕು ಗುಡ್ಡ ಗಾಡುಗಳಿಂದ ಸುತ್ತುವರಿದಿದೆ. ಕರಡಿ, ಚಿರತೆಗಳ ಆವಸ್ತಾನವೂ ಆಗಿದೆ. ಅಲ್ಲದೆ ಆಹಾರ ಅರಸಿ ಕರಡಿಗಳು ನಾಡಿಗೆ ಬರುತ್ತಿರುವ ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಈ ವೇಳೆ ಸಾರ್ವಜನಿಕರು ಗಲಾಟೆ ಮಾಡಿ ಗಾಬರಿ ಗೊಳಿಸದಂತೆ ಅಧಿಕಾರಿಗಳು ಹೇಳಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ತಿಪ್ಪೇಸ್ವಾಮಿ, ಗಸ್ತು ಅರಣ್ಯ ಪಾಲಕರಾದ ಶಿವರಾಜ್, ನಾಗರಾಜ್, ಸಂತೋಷ್ ಹಾಗೂ ಸಿಬ್ಬಂದಿ ಇದ್ದರು.