ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಪಟ್ಟಣದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಡಮ್ ಇಂಗ್ಲೀಷ್ ಶಾಲೆಯಲ್ಲಿ ೫ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭವ್ಯಾ ಎಂಬ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲೆ ಉಷಾಕಿರಣ್ ಅವರು, ಬೆತ್ತದಿಂದ ಥಳಿಸಿದ್ದು ಪರಿಣಾಮವಾಗಿ ವಿದ್ಯಾರ್ಥಿನಿಯ ಕಾಲುಗಳು, ಕೈ, ಹಾಗೂ ಕಿವಿಯ ಭಾಗದಲ್ಲಿ ಬಾಸುಂಡೆಗಳು ಬಂದಿವೆ ಎಂದು ಪೋಷಕರು ಶಾಲೆಯ ಮುಂದೆ ಜಮಾಯಿಸಿ ಕೆಲ ಕಾಲ ಪ್ರತಿಭಟನೆ ನಡೆಸಿ, ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.ಶಾಲೆಯಲ್ಲಿ ಪ್ರಾಂಶುಪಾಲೆಯ ಮಗುವಿಗೆ ಸಹಾಯ ಮಾಡುವ ವಿಚಾರವಾಗಿ, ವಿದ್ಯಾರ್ಥಿನಿಯನ್ನು ಕರೆದು, ಹೊಡೆಯಲಾಗಿದೆ. ಬುಧವಾರ ಬೆಳಗ್ಗೆ ೯.೩೦ ಗಂಟೆಯಲ್ಲಿ ಹೊಡೆದು, ಸಂಜೆಯವರೆಗೂ ಒಂದು ಕೊಠಡಿಯಲ್ಲಿ ಕೂರಿಸಿದ್ದಾರೆ. ಬಾಸುಂಡೆಗಳು ಕಾಣಿಸದಂತೆ ಸ್ಪ್ರೇ ಮಾಡಿದ್ದಾರೆ. ಮಗುವನ್ನು ಯಾವ ಕಾರಣಕ್ಕೆ ಹೊಡೆಯಲಾಗಿದೆ ಎನ್ನುವ ಬಗ್ಗೆ ನಮಗೆ ಮಾಹಿತಿಯನ್ನು ನೀಡಿಲ್ಲ. ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ಮಗು ಅಸ್ವಸ್ಥಗೊಂಡಿರುವುದನ್ನು ಕಂಡು ವಿಚಾರಣೆ ಮಾಡಿದಾಗ ಹೊಡೆದಿರುವುದು ಗೊತ್ತಾಯಿತು ಎಂದು ಮಗುವಿನ ತಾಯಿ ಪ್ರಭಾವತಿ ತಿಳಿಸಿದರು.
ನಾವು ಗುರುವಾರ ಬೆಳಗ್ಗೆ ಶಾಲೆಗೆ ಬಂದು ಪ್ರಾಂಶುಪಾಲೆಯ ಬಳಿ ವಿಚಾರಿಸಿದಾಗ, ನಿಮ್ಮ ಮಗು ತಪ್ಪು ಮಾಡಿದೆ ಅದಕ್ಕಾಗಿ ಹೊಡೆದಿದ್ದೇನೆ. ನೀವು ಏನು ಮಾಡ್ತಿರೋ ಮಾಡಿಕೊಳ್ಳಿ ಎಂದು ಮಾತನಾಡಿದರು. ಶಾಲೆಯಲ್ಲಿರುವ ಇತರೆ ಮಹಿಳಾ ನೌಕರರನ್ನು ಬಿಟ್ಟು, ನಮ್ಮ ಮೇಲೆ ದೌರ್ಜನ್ಯ ಮಾಡಿಸಲು ಮುಂದಾಗಿದ್ದಾರೆ. ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಶಿಕ್ಷಣ ಇಲಾಖೆಯ ಆಯುಕ್ತರು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು, ಗೃಹ ಸಚಿವರಿಗೆ ದೂರು ಕೊಟ್ಟಿದ್ದೇವೆ ಎಂದು ವಿದ್ಯಾರ್ಥಿಯ ತಂದೆ ಆಂಜಿನಪ್ಪ ಹೇಳಿದರು. ಪೊಲೀಸರು ದೂರು ದಾಖಲಿಸಿಕೊಂಡು ಶಾಲೆಗೆ ಹೋಗಿ ಮಹಜರು ನಡೆಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.ಘಟನೆಯ ಕುರಿತು ಪ್ರಾಂಶುಪಾಲೆ ಉಷಾಕಿರಣ್ ಅವರು ಮಾತನಾಡಿ, ಶಾಲೆಯಲ್ಲಿ ಅಂಗವಿಕಲ ಮಗು ಇದೆ. ಅದನ್ನು ನೋಡಿಕೊಳ್ಳುವುದಕ್ಕೆ ಒಬ್ಬರನ್ನು ನೇಮಕ ಮಾಡಿದ್ದೇವೆ. ಆದರೂ ಮಕ್ಕಳೂ ಸಹಾಯ ಮಾಡುತ್ತಾರೆ. ಕೆಲವು ಮಕ್ಕಳು, ಅಂಗವಿಕಲ ಮಗುವನ್ನು ಹೀನಾಯವಾಗಿ ನೋಡುತ್ತಿದ್ದರು. ಅದಕ್ಕಾಗಿ ಬೆತ್ತದಿಂದ ಹೊಡೆದಿರುವುದು ನಿಜ. ಮಗುವಿನ ಪೋಷಕರ ಗಮನಕ್ಕೆ ತರಬೇಕಾಗಿತ್ತು. ಮಗುವಿಗೆ ಹೊಡೆದಿರುವುದು ತಪ್ಪಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.