ಸೌಂದರ್ಯ ಪ್ರಜ್ಞೆ ಹೆಚ್ಚಾಗಿ ಚರ್ಮರೋಗ ತಜ್ಞರಿಗೆ ಬೇಡಿಕೆ: ಡಾ.ಡಿ.ತಿಮ್ಮಯ್ಯ

| Published : Dec 16 2024, 12:50 AM IST

ಸೌಂದರ್ಯ ಪ್ರಜ್ಞೆ ಹೆಚ್ಚಾಗಿ ಚರ್ಮರೋಗ ತಜ್ಞರಿಗೆ ಬೇಡಿಕೆ: ಡಾ.ಡಿ.ತಿಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚರ್ಮದ ಆರೋಗ್ಯ ಕಾಪಾಡಲು ನಿತ್ಯ 2 ರಿಂದ 3 ಲೀಟರ್ ನೀರು ಕುಡಿಯಬೇಕು. ನೀರಿನ ಅಂಶ ಕಡಿಮೆ ಆದಷ್ಟು ಚರ್ಮ ಸುಕ್ಕಾಗುತ್ತದೆ. ಚರ್ಮದ ಎಲ್ಲಾ ಕಾಯಿಲೆ ಬಗ್ಗೆ ಈ ಕೃತಿ ಬೆಳಕು ಚೆಲ್ಲಿದೆ. ಈ ಕಾಲದಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದೆ. ಹೀಗಾಗಿ ಚರ್ಮ ರೋಗ ತಜ್ಞರಿಗೆ ಬೇಡಿಕೆ ಇದ್ದೇ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಇತ್ತೀಚೆಗೆ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಹೆಚ್ಚಾಗುತ್ತಿರುವುದರಿಂದ ಚರ್ಮ ರೋಗ ತಜ್ಞರಿಗೆ ಬೇಡಿಕೆ ಹೆಚ್ಚಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.

ನಗರದ ಐಡಿಯಲ್ ಜಾವಾ ರೋಟರಿ ಶಾಲೆ ಸಭಾಂಗಣದಲ್ಲಿ ಭಾನುವಾರ ಮೈಸೂರು ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಎಚ್. ಹನುಮಂತಪ್ಪ ಅವರ ಚರ್ಮದ ಕಾಯಿಲೆಗಳು ಮತ್ತು ಸಂರಕ್ಷಣೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚರ್ಮದ ಆರೋಗ್ಯ ಕಾಪಾಡಲು ನಿತ್ಯ 2 ರಿಂದ 3 ಲೀಟರ್ ನೀರು ಕುಡಿಯಬೇಕು. ನೀರಿನ ಅಂಶ ಕಡಿಮೆ ಆದಷ್ಟು ಚರ್ಮ ಸುಕ್ಕಾಗುತ್ತದೆ. ಚರ್ಮದ ಎಲ್ಲಾ ಕಾಯಿಲೆ ಬಗ್ಗೆ ಈ ಕೃತಿ ಬೆಳಕು ಚೆಲ್ಲಿದೆ. ಈ ಕಾಲದಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದೆ. ಹೀಗಾಗಿ ಚರ್ಮ ರೋಗ ತಜ್ಞರಿಗೆ ಬೇಡಿಕೆ ಇದ್ದೇ ಇದೆ ಎಂದರು.

ಸಿಪ್ಪೆ ಸುಲಿದ ಬಾಳೆ ಹಣ್ಣು ಹೆಚ್ಚು ದಿನ ಉಳಿಯದು. ಚರ್ಮವು ಸಿಪ್ಪೆಯಂತೆ ನಮ್ಮ ದೇಹವನ್ನು ಕಾಪಾಡುತ್ತದೆ. ಚರ್ಮ ಮನುಷ್ಯನ ಬಹು ಸೂಕ್ಷ್ಮ ಅಂಗ. ಅದನ್ನು ತೆಗೆದರೆ ದೇಹಕ್ಕೆ ಅಸ್ತಿತ್ವ ಇಲ್ಲ. ಇಡೀ ಅಂಗಾಂಗಗಳನ್ನು ರಕ್ಷಣೆ ಮಾಡುವುದು ಅದರ ಕೆಲಸ. ನಾವು ನೋಡಲು ಅಂದವಾಗಿ ಕಾಣಲು ನಮ್ಮ ಚರ್ಮ ಕಾರಣ. ಈಚೆಗೆ ಬಿಸಿಲಲ್ಲಿ ಬೇಯುವವರು ಕಡಿಮೆ. ಹೀಗಾಗಿ ಹೆಚ್ಚಿನವರು ಬಿಳಿಯರಾಗುತ್ತಿದ್ದಾರೆ ಎಂದು ಅವರು ವಿವರಿಸಿದರು.

ಕೃತಿ ಬಿಡುಗಡೆಗೊಳಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಮಾತನಾಡಿ, ಚರ್ಮ ಕಾಯಿಲೆ ಹಾಗೂ ಸಂರಕ್ಷಣೆ ಕುರಿತು ಇದೊಂದು ಉಪಯುಕ್ತವಾದ ಕೃತಿ. 15-20 ಕಾಯಿಲೆಗಳು, ಅದರ ಬಗೆಗಿನ ಮೂಢನಂಬಿಕೆ, ಚಿಕಿತ್ಸೆ ಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ಹಲವು ದಶಕಗಳ ವೃತ್ತಿ ಅನುಭವವನ್ನು ಹನುಮಂತಪ್ಪ ಬರಹದಲ್ಲಿ ದಾಖಲಿಸಿದ್ದಾರೆ ಎಂದರು.

ಕೃತಿ ಕುರಿತು ಆರೋಗ್ಯ ಇಲಾಖೆ ನಿವೃತ್ತ ನಿರ್ದೇಶಕ ಡಾ.ಜಿ.ಎಂ.ವಾಮದೇವ ಮಾತನಾಡಿದರು. ಲೇಖಕ ಎಚ್. ಹನುಮಂತಪ್ಪ 11 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಎಂಜಿಆರ್ ಅರಸ್, ಡಾ. ಕವಿತಾ ಹನುಮಂತಪ್ಪ ಇದ್ದರು.