ಸಾರಾಂಶ
ಗಣಪತಿ ಭಟ್ಟರು ಗ್ರಾಮೀಣ ಪ್ರದೇಶದ ವ್ಯಕ್ತಿಯಾಗಿದ್ದರೂ ವಜ್ರದಂತೆ ಪ್ರಕಾಶಿಸುತ್ತಿದ್ದಾರೆ. ಸತತ ಸಾಧನೆಯಿಂದ ಅವರಿಗೆ ಕಲಾಸರಸ್ವತಿ ಒಲಿದಳು.
ಯಲ್ಲಾಪುರ:
ಪ್ರಶಸ್ತಿಯ ಆಸೆಗಾಗಿ ಸಂಗೀತಗಾರನಾಗಿಲ್ಲ. ಈ ಕ್ಷೇತ್ರವನ್ನು ನಾನು ಆಸಕ್ತಿಯಿಂದ ಆಯ್ದುಕೊಳ್ಳದಿದ್ದರೂ, ಈ ಕಲೆ ನನ್ನ ನಿರೀಕ್ಷೆಗೂ ಮಿಗಿಲಾಗಿ ಒಲಿದು ಬಂತು. ನಿರಂತರ ಪರಿಶ್ರಮ ನನ್ನ ಸಾಧನೆಗೆ ಪೂರಕವಾಯಿತು. ಶ್ರೋತೃಗಳಾದ ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನನ್ನ ಕಣ್ಣ ಹನಿಗಳೇ ಕಾಣಿಕೆ ಎಂದು ಪ್ರತಿಷ್ಠಿತ ತಾನ್‌ಸೇನ ಪ್ರಶಸ್ತಿ ಪುರಸ್ಕೃತ ಪಂ. ಗಣಪತಿ ಭಟ್ಟ ಹಾಸಣಗಿ ಹೇಳಿದರು.ಹಾಸಣಗಿಯ ಪಂ. ಗಣಪತಿ ಭಟ್ಟರ ನಿವಾಸಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಾಧಕರ ಮನೆ ಬಾಗಿಲಿಗೆ ಕಸಾಪ ಅಂಗವಾಗಿ ತೆರಳಿ ಸನ್ಮಾನಿಸಿದ ನಂತರ ಮಾತನಾಡಿದರು.ಮಾಧ್ಯಮಿಕ ಶಾಲೆಯ ನಂತರ ಸಂಗೀತ ನನಗೆ ಆಪ್ತವಾಗತೊಡಗಿತು. ನಾಟಕಗಳಲ್ಲಿ ಪಾತ್ರ ವಹಿಸಿದ್ದ ನಾನು ಮುಂದಿನ ಶಿಕ್ಷಣಕ್ಕಾಗಿ ಧಾರವಾಡಕ್ಕೆ ತೆರಳಿದೆ. ಅಲ್ಲಿ ಸಂಗೀತದ ಕಲಿಕೆಗೆ ಅವಕಾಶವಾಗಿ ಪ್ರತಿಭಾವಂತ ಕಲಾವಿದರ ಪರಿಚಯವೂ ಲಭಿಸಿತು. ನಂತರ ಮುಂಬೈಗೆ ತೆರಳಿದ ಮೇಲೆ, ಅನೇಕ ಅವಕಾಶಗಳು ಬಂದು ಎಲ್ಲವೂ ಯಶಸ್ವಿಯಾದವು. ಎಲ್ಲರ ಸಹಕಾರದಿಂದ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಲು ಸಾಧ್ಯವಾಯಿತು. ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ಪತ್ನಿ ನಾಗವೇಣಿ ಹಾಗೂ ಕೃಷಿಯ ಜವಾಬ್ದಾರಿ ಹೊತ್ತ ಮಗ ವಸಂತನ ಸಹಕಾರದಿಂದ ಸಾಧನೆ ಸಾಧ್ಯವಾಯಿತು ಎಂದು ತಮ್ಮ ಸಾಧನೆಯ ಗಾಥೆಯನ್ನು ವಿವರಿಸಿದರು.
ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಮಾತನಾಡಿ, ಗಣಪತಿ ಭಟ್ಟರು ಗ್ರಾಮೀಣ ಪ್ರದೇಶದ ವ್ಯಕ್ತಿಯಾಗಿದ್ದರೂ ವಜ್ರದಂತೆ ಪ್ರಕಾಶಿಸುತ್ತಿದ್ದಾರೆ. ಸತತ ಸಾಧನೆಯಿಂದ ಅವರಿಗೆ ಕಲಾಸರಸ್ವತಿ ಒಲಿದಳು. ಗುರುಗಳ ಮೇಲಿನ ನಿಷ್ಠೆಯ ಕಾರಣ ಬೃಹತ್ ಆಲದ ಮರವಾಗಿ ಬೆಳೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದರು ಎಂದರು.ರಂಗ ಕರ್ಮಿ ಆರ್.ಎನ್. ಭಟ್ಟ ದುಂಡಿ ಮಾತನಾಡಿ, ಪ್ರಶಸ್ತಿಗಳು ಅನೇಕರಿಗೆ ಬರುತ್ತವೆ. ಆದರೆ ಗಣಪತಿ ಭಟ್ಟರಿಗೆ ಲಭಿಸಿದ ಪ್ರಶಸ್ತಿ ಯಥೋಚಿತವೆನಿಸಿದೆ. ಗಣಪತಿ ಭಟ್ಟರ ಕಾರಣದಿಂದ ಜಿಲ್ಲೆ ಹಿಂದೂಸ್ಥಾನಿ ಗಾಯಕರ ತವರೂರು ಎಂಬ ಗರಿಮೆ ಗಳಿಸಲು ಸಾಧ್ಯವಾಗಿದೆ. ಸಮಾಜದಲ್ಲಿರುವ ಗುಣಗ್ರಾಹಿಗಳಿಂದಾಗಿ ಗಣಪತಿ ಭಟ್ಟರ ಸಾಧನೆಗೆ ಪ್ರಶಸ್ತಿ ಲಭಿಸಿದೆ ಎಂದರು.ನಾಗೇಂದ್ರ ಭಟ್ಟ ಕುಂಬಾರಕುಳಿ, ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ ಸನ್ಮಾನಿತರ ಕುರಿತಾಗಿ ಮಾತನಾಡಿದರು. ಪತ್ನಿ ನಾಗವೇಣಿ, ಪುತ್ರ ವಸಂತ ಭಟ್ಟ, ಯು.ಎಸ್. ಭಟ್ಟ, ಕೃಷ್ಣ ಭಟ್ಟ ನಾಯ್ಕನಕೆರೆ, ಯಮುನಾ ಭಟ್ಟ ಉಪಸ್ಥಿತರಿದ್ದರು.ತಾಲೂಕು ಕಸಾಪ ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಕಾರ್ಯದರ್ಶಿ ಜಿ.ಎನ್. ಭಟ್ಟ ಸ್ವಾಗತಿಸಿ, ನಿರ್ವಹಿಸಿದರು.
೧೮ವೈಎಲ್‌ಪಿ೦೩ತಾಲೂಕು ಕಸಾಪ ವತಿಯಿಂದ ತಾನ್‌ಸೇನ್ ಪ್ರಶಸ್ತಿ ಪುರಸ್ಕೃತ ಗಣಪತಿ ಭಟ್ಟರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು.