ಸಾರಾಂಶ
ಕನ್ನಪ್ರಭ ವಾರ್ತೆ ಬೀದರ್
ಕೋವಿಡ್ ಬಗ್ಗೆ ಜಿಲ್ಲೆಯ ಜನರು ಆತಂಕ ಪಡಬೇಕಿಲ್ಲ. ಆದರೆ, ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಮುಂಜಾಗ್ರತೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜ್ವರ, ನೆಗಡಿ, ಕೆಮ್ಮು ಇರುವವರು ಮಾಸ್ಕ್ ಧರಿಸಬೇಕು. ಹೆಚ್ಚಿನ ತೊಂದರೆಯಾದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದ ಸಲಹೆಯಿತ್ತರು.
ರೋಗ ಉಲ್ಬಣಿಸಿದರೆ ಮಾತ್ರ ಆಸ್ಪತ್ರೆಗೆ ದಾಖಲಾಗಿ: ಕೋವಿಡ್-19 ರೋಗದ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬಹುದಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮನೆಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಪರೀಕ್ಷಿಸುತ್ತಾರೆ. ರೋಗ ಉಲ್ಬಣ ಎಂದೆನಿಸಿದರೆ ಮಾತ್ರ ಜನರು ಆಸ್ಪತ್ರೆಗಳಿಗೆ ದಾಖಲಾಗಬೇಕೆಂದರು.ಜಾತ್ರೆ, ಉತ್ಸವಗಳಿಗೆ ನಿರ್ಬಂಧವಿಲ್ಲ, ಸ್ವಯಂ ಕಾಳಜಿ ಅತ್ಯಗತ್ಯ: ರಾಜ್ಯ ಸರ್ಕಾರ ಕಾಲ ಕಾಲಕ್ಕೆ ನೀಡುವ ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲನೆ ಮಾಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಜಾತ್ರೆ, ಉತ್ಸವ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಸ್ವಯಂ ಆರೋಗ್ಯದ ಬಗ್ಗೆ ನಾವು ಗಮನಕೊಡಬೇಕು. ಹೊಸ ವರ್ಷ ಯಾವುದೇ ಉತ್ಸವದ ಸಂದರ್ಭಗಳಲ್ಲಿ ಜನರು ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕೆಂದರು.
ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಿ: ಈ ಹಿಂದೆ ಕೋವಿಡ್ ಮೊದಲ ಮತ್ತು 2ನೇ ಅಲೆ ಬೀದರ್‌ನಿಂದಲೇ ಆರಂಭವಾಗಿತ್ತು. ಹಾಗಾಗಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಇತರೆ ಯಾವುದೇ ಸಮಸ್ಯೆಗಳಾಗದಂತೆ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ, ವೈದ್ಯರ ಸಲಹೆ ಇರಲಿ: ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಇತಿಹಾಸ ತಿಳಿಯಬೇಕು. 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಬೇಕು. ಹೆಚ್ಚಿನ ತೊಂದರೆ ಮಕ್ಕಳಲ್ಲಿ ಕಂಡು ಬಂದರೆ ಅವರ ಪಾಲಕರಿಗೆ ಶಿಕ್ಷಕರು ಮಾಹಿತಿ ನೀಡಬೇಕು. ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ. ಆದರೂ ವೈದ್ಯರ ಸಲಹೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಗುಂಪು ಸೇರುವುದಕ್ಕೆ ನಿರ್ಬಂಧಗಳಿಲ್ಲ, ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳಿಲ್ಲ: ಜನರು ಗುಂಪು ಸೇರುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳು ಇರುವುದಿಲ್ಲ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಆದರೂ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.ಜಿಪಂ ಸಿಇಒ ಡಾ. ಗಿರೀಶ ಬಡೋಲೆ ಮಾತನಾಡಿ, ಜನರು ಗುಂಪು ಸೇರುವಲ್ಲಿ ಮಾಸ್ಕ್‌ಗಳನ್ನು ಹಾಕಿಕೊಳ್ಳಿ. ಶಾಲಾ ಮತ್ತು ಅಂಗನವಾಡಿ ಕೇಂದ್ರಗಳಿಗೆ ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳಿಗೆ ಕಳಿಸಬೇಡಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಮತ್ತು ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕೆಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್ ಮಾತನಾಡಿ, ಪೊಲೀಸರು ತುರ್ತಾಗಿ ಸ್ಪಂದನೆ ಮಾಡಲು ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡಲಿ, ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಈಗಾಗಲೇ ಹಿಂದಿನ ಅಲೆಯಲ್ಲಿ ಸಮಸ್ಯೆಗಳನ್ನು ನೋಡಿದ್ದು ಎಲ್ಲರೂ ಸೇರಿ ತಂಡದ ರೀತಿಯಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಿದರು.ಸಭೆಯಲ್ಲಿ ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜ್ಞಾನೇಶ್ವರ ನಿರಗುಡೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೆಶಕ ಪ್ರಭಾಕರ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ ಡೋಂಗರೆ ಸೇರಿದಂತೆ ಮತ್ತಿತರು ಅಧಿಕಾರಿಗಳು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))