ಸಾರಾಂಶ
ಶಿವಮೊಗ್ಗ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸುಶಿಕ್ಷಿತರ ಜೊತೆಗೆ ಸುಸಂಸ್ಕೃತ ಯುವ ಸಮೂಹ ಸಮಾಜಕ್ಕೆ ಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ರಾಷ್ಟ್ರೀಯ ಶಿಕ್ಷಣ ಸಮಿತಿ, ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಪಡೆದವರು ಕಸ ಎಸೆದು ಶಿಕ್ಷಣ ಇಲ್ಲದವರು ಅದನ್ನು ಶುಚಿ ಮಾಡುವುದಾದರೆ ಶಿಕ್ಷಣಕ್ಕೆ ಸಿಕ್ಕ ಬೆಲೆಯಾದರು ಏನು ಎಂಬ ಪ್ರಶ್ನೆ ಮೂಡುತ್ತದೆ. ಹಾಗಾಗಿ ಸುಸಂಸ್ಕೃತ ಸೌಜನ್ಯತೆ ತುಂಬಾ ಮುಖ್ಯ ಎಂದ ಅವರು, ಮಕ್ಕಳಿಗೆ ಎನ್ಇಎಸ್ ಸಂಸ್ಥೆ ಸುಸಂಸ್ಕೃತಿಯನ್ನು ಕಲಿಸುತ್ತಿದೆ ಎಂದರು.ಸಂಸ್ಕೃತಿ ಸಂಸ್ಕಾರಗಳಿಂದ ಭಾರತ ಬಲಿಷ್ಟವಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವ ಸಮೂಹದ ಮೇಲಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜವಾಗಿ ಎದುರಿಸಿ. ತೀರ್ಪುಗಾರರಿಗೆ ಅಭಿಮಾನದ ಕೊಡುಗೆ ನೀಡಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಕ್ಕಳಿಗೆ ಇಂತಹ ವೇದಿಕೆಗಳು ಶಾಲಾ ಹಂತದಲ್ಲಿಯೇ ದೊರಕಬೇಕಿದೆ. ಇದರಿಂದ ಪಠ್ಯದ ಜೊತೆಗೆ ಸೃಜನಶೀಲತೆ ಎಂಬುದು ಆಕಾರ ಪಡೆಯಲಿದೆ ಎಂದು ಹೇಳಿದರು.ಈ ವೇಳೆ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ವೆಂಕಟೇಶ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ಪಂಡರಿನಾಥ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಯೋಗೀಶ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.