ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಅಂಚೆ ಇಲಾಖೆ ಸೇವೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗಿರದೆ ಜನತೆಗೆ ಆರ್ಥಿಕ ಸದೃಢತೆ ಒದಗಿಸಲೂ ಶ್ರಮಿಸುತ್ತಿದೆ ಎಂದು ಶಾಸಕ ಜೆ.ಎಸ್.ಬಸವಂತಪ್ಪ ಹೇಳಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಕಂದನಕೋವಿ ಗ್ರಾಮದಲ್ಲಿ ಬುಧವಾರ ಅಂಚೆ ಅಧೀಕ್ಷಕರ ಕಾರ್ಯಾಲಯ ದಾವಣಗೆರೆ ವಿಭಾಗ ಹಾಗೂ ಕಂದನಕೋವಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಕಂದನಕೋವಿ ಶಾಖಾ ಅಂಚೆ ಉದ್ಘಾಟಿಸಿ ಮಾತನಾಡಿ, ಅಂಚೆ ಇಲಾಖೆ ಸೇವೆಗಳು ಪ್ರಾಚಿನದಿಂದ ಇಂದಿನವರೆಗೆ ಪ್ರಸ್ತುತ ಇವೆ. ಈ ನಿಟ್ಟಿನಲ್ಲಿ ಇಲಾಖೆ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕವಾಗಿ ತಲುಪಿಸಿದ ಇಲಾಖೆ ಎಂದರೆ ಅದು ಅಂಚೆ ಇಲಾಖೆಯಾಗಿದೆ. ಇಂದು ಕೂಡ ಕೇಂದ್ರ ಸರ್ಕಾರ ಉತ್ತಮ ಯೋಜನೆ ಜಾರಿಗೊಳಿಸಿದ್ದು, ಅಂಚೆ ಸೇವೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಉಳಿತಾಯ, ಐಪಿಪಿಬಿ ಖಾತೆ ತೆರೆಯುವಿಕೆ, ಆಧಾರ್ ನೋಂದಣಿ, ತಿದ್ದುಪಡಿ, ಉಳಿತಾಯ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ, ಮೈ ಸ್ಟಾಂಪ್, ಮೈಲ್ಸ್ , ಅಂಚೆ ಜೀವ ವಿಮೆ ಸೇರಿದಂತೆ ಹಲವಾರು ಸೌಲಭ್ಯಗಳು ಅಂಚೆ ಇಲಾಖೆಯಲ್ಲಿ ಲಭ್ಯವಿದ್ದು ಸದುಪಯೋಗ ಮಾಡಿಕೊಳ್ಳಬೇಕೆಂದರು.
ರಾಜ್ಯ ಸರ್ಕಾರ ಐದು ಗ್ರಾರಂಟಿ ಜಾರಿಗೊಳಿಸಿದ್ದು, ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಮಹಿಳೆಯರು ಬರುವ ಎರಡು ಸಾವಿರ ರು. ನಲ್ಲಿ ಕನಿಷ್ಠ ₹500 ಅಂಚೆಯಲ್ಲಿ ಆರ್.ಡಿ ಮಾಡಿಸಿ, ನಿಮ್ಮ ಮಕ್ಕಳ ಶಿಕ್ಷಣಕ್ಕೆ ಕೂಡಿಟ್ಟರೆ ಅವರ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ. ಜೊತೆಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಸಲಹೆ ನೀಡಿದರು.ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಉಮಣ್ಣ, ಉಪಾಧ್ಯಕ್ಷೆ ದೀಪಾ, ಉಪ ತಹಸೀಲ್ದಾರ್ ರಾಮಸ್ವಾಮಿ, ಎಇಇ ಶಿವಮೂರ್ತಿ, ಗ್ರಾಪಂ ಪಿಡಿಒ ರಂಗಸ್ವಾಮಿ, ಅಂಚೆ ಅಧಿಕಾರಿಗಳಾದ ನರೇಂದ್ರ ನಾಯ್ಕ, ಅಶ್ವತ್ಥ್, ಮುಖಂಡರಾದ ದೇವೇಂದ್ರಪ್ಪ, ದ್ಯಾಮಣ್ಣ, ಜಗಣ್ಣ, ಕಾಶೆಪ್ಪ, ಕೆಂಚವೀರಪ್ಪ, ಮಹೇಶಣ್ಣ, ಜಯಣ್ಣ, ಶಿವಕುಮಾರ್ ಇನ್ನಿತರರಿದ್ದರು.