ಹಾವೇರಿ:ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಅವುಗಳಿಂದ ವಿವಿಧ ಮೌಲ್ಯವರ್ಧಿತ ಆಹಾರ ಉತ್ಪನ್ನಗಳನ್ನು ತಯಾರಿಸುವ ಮೂಲಕ ಗ್ರಾಮೀಣ ಯುವಕರು ಹಾಗೂ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ದೇವಿಹೊಸೂರಿನ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಲಕ್ಷ್ಮಣ ಕುಕನೂರು ಹೇಳಿದರು.

ತಾಲೂಕಿನ ದೇವಿಹೊಸೂರಿನಲ್ಲಿರುವ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಹಾಗೂ ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಯುವಕರು ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಿಂದ ರೈತರು ಮತ್ತು ಉದ್ಯಮಿಗಳು ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದ ಅವರು, ಸಿರಿಧಾನ್ಯಗಳ ಸಂಸ್ಕರಣೆ, ಪ್ಯಾಕೇಜಿಂಗ್, ಗುಣಮಟ್ಟ ಕಾಪಾಡುವಿಕೆ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಪಾಟೀಲ, ಧಾರವಾಡ ಕೃಷಿ ವಿಜ್ಞಾನ ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ. ಜೆ.ಬಿ. ಗೋಪಾಲ, ನಿವೃತ್ತ ಡೀನ್ ಡಾ. ಲಕ್ಷ್ಮಿನಾರಾಯಣ ಎನ್. ಹೆಗಡೆ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಮಾಲತಿ ಆರ್. ಅವರು ಸಿರಿಧಾನ್ಯಗಳ ಪೌಷ್ಟಿಕತೆ, ಉದ್ಯಮಶೀಲತೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಸಾಧ್ಯತೆಗಳ ಕುರಿತು ಉಪನ್ಯಾಸ ನೀಡಿದರು.

ತರಬೇತಿ ಸಂಯೋಜಕಿ ಡಾ. ನೇತ್ರಾವತಿ ಪಾಟೀಲ ಅವರ ನೇತೃತ್ವದಲ್ಲಿ ನಡೆದ ತರಬೇತಿಯಲ್ಲಿ ಸಿರಿಧಾನ್ಯಗಳಿಂದ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸುವ ಕುರಿತು ಪ್ರಾತ್ಯಕ್ಷಿಕೆ, ತಾಂತ್ರಿಕ ಮಾಹಿತಿ ಹಾಗೂ ಸಂಸ್ಕರಣೆ ವಿಧಾನಗಳ ಬಗ್ಗೆ ವಿವರಿಸಲಾಯಿತು.


ಡಾ. ತಿಪ್ಪಣ್ಣ ಸ್ವಾಗತಿಸಿದರು. ಡಾ. ಶ್ರೀನಿವಾಸ ವಂದಿಸಿದರು. ಅನ್ನಪೂರ್ಣಾ ಕಾರ್ಯಕ್ರಮ ನಿರೂಪಿಸಿದರು.

40ಕ್ಕೂ ಹೆಚ್ಚು ಮಂದಿಗೆ ಪ್ರಾಯೋಗಿಕ ತರಬೇತಿ..

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಗ್ರಾಮೀಣ ಯುವಕರು, ಮಹಿಳೆಯರು ಹಾಗೂ ರೈತರು ತರಬೇತಿಯಲ್ಲಿ ಭಾಗವಹಿಸಿ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಸಂಸ್ಕರಣೆ, ಗುಣಮಟ್ಟ ಕಾಪಾಡುವಿಕೆ ಹಾಗೂ ಮಾರುಕಟ್ಟೆಗೊಳಿಸುವಿಕೆ ಕುರಿತು ಸಮಗ್ರ ತರಬೇತಿ ಪಡೆದರು.

ತರಬೇತಿ ವೇಳೆ ಡಾ. ಅಕ್ಷತಾ ರಾಮಣ್ಣನವರ್ ಅವರು ಸಿರಿಧಾನ್ಯಗಳ ಉತ್ಪಾದನೆ ಹಾಗೂ ಕೊಯ್ಲಿನ ನಂತರದ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಡಾ. ಲಾವಣ್ಯ ಎಂ.ಎನ್. ಅವರು ಸಿರಿಧಾನ್ಯ ಮೌಲ್ಯರ್ವತ ಉತ್ಪನ್ನಗಳ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ನಡೆಸಿದರು. ಡಾ. ಸುಕ್ತಿಜಾ ಎಂ.ಪಿ. ಅವರು ಸಂಸ್ಕರಣೆ, ಆಹಾರ ಸುರಕ್ಷತಾ ಕ್ರಮಗಳು ಹಾಗೂ ಪ್ಯಾಕೇಜಿಂಗ್ ತಂತ್ರಗಳ ಕುರಿತು ವಿವರಿಸಿದರು. ಡಾ. ಪಲ್ಲವಿ ಜಿ. ಅವರು ಸಿರಿಧಾನ್ಯ ಉದ್ಯಮ ಸ್ಥಾಪನೆ ಕುರಿತು ಮಾರ್ಗದರ್ಶನ ನೀಡಿದರೆ, ಡಾ. ನೇತ್ರಾವತಿ ಪಾಟೀಲ ಅವರು ಸಿರಿಧಾನ್ಯ ಉತ್ಪನ್ನಗಳ ಮಾರುಕಟ್ಟೆ ನಿರ್ವಹಣೆ ಮತ್ತು ಬ್ರ್ಯಾಡಿಂಗ್ ಕುರಿತು ತರಬೇತಿ ನೀಡಿದರು.