ಒಳಪಂಗಡಗಳ ಕಾರಣದಿಂದ ಹರಿದು ಹಂಚಿಹೋಗಿರುವ ಸಮಾಜ ಒಂದಾಗುವ ಕಾಲ ಬಂದಿದೆ.

ಕುಷ್ಟಗಿ: ವೀರಶೈವ ಸಮಾಜದ ಯುವಕರು ಉದ್ಯೋಗ ಹುಡುಕುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಬೇಕು ಎಂದು ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಪಟ್ಟಣದ ಎನ್‌ಸಿಎಚ್ ಕಲ್ಯಾಣ ಮಂಟಪದ ಆವರಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಘಟಕ ಹಾಗೂ ಕುಷ್ಟಗಿ ತಾಲೂಕು ಘಟಕ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವರೆಂದರೆ ಬಸವಣ್ಣನವರ ಅನುಯಾಯಿಗಳು. ಸಮಾಜದವರು ಒಗ್ಗಟ್ಟಾಗಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಹತ್ತಿ ಕಾರ್ಖಾನೆಗಳ ಸ್ಥಾಪನೆ ಸೇರಿದಂತೆ ಉದ್ಯಮಗಳಿಗೆ ಉತ್ತೇಜನ ನೀಡಬೇಕು ಎಂದರು. ವಿಜಯ ಸಂಕೇಶ್ವರ ಹಾಗೂ ಪ್ರಭಾಕರ ಕೋರೆ ಅವರು ಕೆಳಮಟ್ಟದಿಂದ ಉನ್ನತ ಸ್ಥಾನಕ್ಕೇರಿದ ಸಾಧಕರು. ಯುವಜನರು ಅವರನ್ನು ಸ್ಫೂರ್ತಿಯಾಗಿ ಸ್ವೀಕರಿಸಿ, ಶಿಕ್ಷಣ, ಆರ್ಥಿಕತೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಮಾಜದವರು ಮುನ್ನಡೆಯಲು ಸಂಘಟಿತರಾಗುವುದು ಅಗತ್ಯ ಎಂದು ಹೇಳಿದರು.

ಮಹಾಸಭಾದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಬಸವಣ್ಣನವರು ಸಾರಿದ ಸಮಾನತೆಯ ತತ್ವದಂತೆ ಸಮ ಸಮಾಜ ನಿರ್ಮಾಣ ಮಾಡಬೇಕು. ಒಳಪಂಗಡಗಳ ಕಾರಣದಿಂದ ಹರಿದು ಹಂಚಿಹೋಗಿರುವ ಸಮಾಜ ಒಂದಾಗುವ ಕಾಲ ಬಂದಿದೆ. ತಾಯಂದಿರು ಮಕ್ಕಳಲ್ಲಿ ವೀರಶೈವ ಲಿಂಗಾಯತ ಧರ್ಮದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿ, ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಸುಭದ್ರ ಸಮಾಜ ನಿರ್ಮಿಸಲು ಸಾಧ್ಯ. ಶಿಕ್ಷಣವೇ ಆರ್ಥಿಕ ಸುಧಾರಣೆಯ ಮೂಲಮಂತ್ರವಾಗಿದೆ. ವೀರಶೈವ ಸಮಾಜದ ಒಳಪಂಗಡಗಳು ಒಗ್ಗಟ್ಟಾದರೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬಹುದು. ಸಂಘಟನೆಯ ಬಲದಿಂದ ಸಮಾಜಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಮಾಜಿ ಶಾಸಕ ಪರಣ್ಣ ಮನವಳ್ಳಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಜನಸಂಖ್ಯೆಗೆ ಹೋಲಿಸಿದರೆ ಸದಸ್ಯತ್ವ ಪ್ರಮಾಣ ಕಡಿಮೆಯಿದೆ. ಸಮಾಜದ ಜನಸಂಖ್ಯೆ ಸುಮಾರು ಒಂದೂವರೆ ಕೋಟಿ ಇದ್ದರೂ ಸಮೀಕ್ಷೆಯಲ್ಲಿ 65 ಲಕ್ಷ ಎಂದು ವರದಿಯಾಗಿರುವುದು ಗಮನಿಸಬೇಕಾದ ಸಂಗತಿ. ರಾಜ್ಯಕ್ಕೆ ಹಲವು ಮುಖ್ಯಮಂತ್ರಿಗಳನ್ನು ನೀಡಿದ ಸಮಾಜ ಇಂದು ಒಗ್ಗಟ್ಟಿನಿಂದ ಸಂಘಟನಾತ್ಮಕವಾಗಿ ಬೆಳೆಯಬೇಕಿದೆ ಎಂದರು.

ಕರಿಬಸವ ಶ್ರೀಗಳು, ಚನ್ನಬಸವ ಶ್ರೀಗಳು, ಮಹೇಶ್ವರ ಶ್ರೀಗಳು, ರುದ್ರಯ್ಯ ತಾತನವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ, ರಾಜ್ಯ ಮಹಿಳಾ ಅಧ್ಯಕ್ಷೆ ಮುಕ್ತಾಂಬಾ, ಡಾ. ಕೆ. ಬಸವರಾಜ, ಶ್ರೀನಿವಾಸ ರೆಡ್ಡಿ, ಮಾಜಿ ಸಂಸದ ಶಿವರಾಮಗೌಡ, ಶರಣಪ್ಪ ಹ್ಯಾಟಿ, ಉಮಾಪತಿ ಅಕ್ಕಿ, ಶಶಿಧರ ಕವಲಿ, ದೇವೇಂದ್ರಪ್ಪ ಬಳೂಟಗಿ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಶರಣಪ್ಪ ಬಿಜಕಲ್ ಹಾಗೂ ರಾಜೇಂದ್ರಕುಮಾರ ಶೆಟ್ಟಿ ಉಪಸ್ಥಿತರಿದ್ದರು.

ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಅಶ್ವಿನಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ ನೆರವೇರಿತು. ಸದಾಶಿವ ಪಾಟೀಲ ತಂಡ ರೈತಗೀತೆ ಪ್ರಸ್ತುತಪಡಿಸಿತು. ಶಿಕ್ಷಕ ಮಲ್ಲಪ್ಪ ಕುದುರಿ ಕಾರ್ಯಕ್ರಮ ನಿರೂಪಿಸಿದರು. 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.