೧೨೦೦ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಪುಣ್ಯ ಕ್ಷೇತ್ರಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ದಟ್ಟ ಅರಣ್ಯ, ರಮಣೀಯ ವಾತಾವರಣದ ನಡುವೆ ಕುಳಿತಿರುವ ಸಾವಿರಾರು ವರ್ಷ ಇತಿಹಾಸವುಳ್ಳ ಶ್ರೀ ಕ್ಷೇತ್ರ ಬೆಡಸಗಾಂವ ರಾಮಲಿಂಗೇಶ್ವರ ದೇವಾಲಯವೀಗ ಮಹಾಶಿವರಾತ್ರಿ ಉತ್ಸವಕ್ಕೆ ಸಿದ್ಧವಾಗಿದೆ.

ತಾಲೂಕಿನ ಬೆಡಸಗಾಂವ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದ ೮೪ನೇ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಫೆ. ೧೫ ಮತ್ತು ೧೬ ರಂದು ವಿಜೃಂಭಣೆಯಿಂದ ಜರುಗಲಿದೆ.ಫೆ. ೧೫ರಂದು ಬೆಳಗ್ಗೆ ೭ ಗಂಟೆಯಿಂದ ರಾತ್ರಿ ೧೦ರ ವರೆಗೆ ದೇವಾಲಯದಲ್ಲಿ ಹಣ್ಣು ಕಾಯಿ ಸೇವೆ ನಡೆಯಲಿದ್ದು, ರಾತ್ರಿ ೧೦.೩೦ಕ್ಕೆ ಮಹಾಮಂಗಳಾರತಿ ಜರುಗಲಿದ್ದು, ಬಳಿಕ ಮನರಂಜನಾ ಕಾರ್ಯಕ್ರಮ. ಫೆ. ೧೬ರಂದು ಬೆಳಗ್ಗೆ ೫.೩೦ಕ್ಕೆ ಪಲ್ಲಕ್ಕಿ ಉತ್ಸವ, ೧೦ರಿಂದ ದೇವರಿಗೆ ತುಲಾಭಾರ ಮುಂತಾದ ಹರಕೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ.

ಬಿಜ್ಜಳನ ಉಪರಾಜಧಾನಿ:


ದೇವಾಲಯ ೧೨೦೦ ವರ್ಷಗಳ ಇತಿಹಾಸ ಹೊಂದಿದೆ. ಬನವಾಸಿ ಅರಸ ಕಾಲದ ಬಿಜ್ಜಳನ ಉಪರಾಜಧಾನಿಯಾಗಿ ಮೆರೆದ ಆಗಿನ ಕಾಲದ ಬೆಡಸಗಾಮೆ ಎಂಬ ಊರು ಇಂದು ಬೆಡಸಗಾಂವ ಆಗಿದೆ ಎಂದು ಇಲ್ಲಿರುವ ಶಿಲಾಶಾಸನಗಳು ಹೇಳುತ್ತವೆ. ದೇವಾಲಯ ಹಾಗೂ ದೇವಾಲಯದೊಳಗಿರುವ ಶಿವಲಿಂಗ ಕರಿಶಿಲೆಯಿಂದ ನಿರ್ಮಿತವಾಗಿವೆ. ರಾಮಲಿಂಗೇಶ್ವರ ಲಿಂಗವು ಸುಮಾರು ೫.೫ ಅಡಿ ಎತ್ತರವಿದ್ದು, ಆಕರ್ಷಣಿಯವಾಗಿದೆ. ದೇವಾಲಯ ಬಲಭಾಗದ ಬೆಟ್ಟದಿಂದ ನಿರಂತರವಾಗಿ ನೀರು ಹರಿದು ಬರುತ್ತದೆ.

ಹಿಂದೆ ರಾಮ ಲಕ್ಷ್ಮಣರು ೧೪ ವರ್ಷ ವನವಾಸ ಕೈಗೊಂಡ ವೇಳೆ ಈ ಮಾರ್ಗವಾಗಿ ಬನವಾಸಿಗೆ ಹೋಗುತ್ತಿರುವ ಸಂದರ್ಭದಲ್ಲಿ ವಿಶ್ರಾಂತಿಗಾಗಿ ಇಲ್ಲಿ ತಂಗಿ, ಬಾಯಾರಿಕೆ ತಣಿಸಿಕೊಳ್ಳಲು ರಾಮ ತನ್ನ ಬಿಲ್ಲಿನಿಂದ ಬಂಡೆಗೆ ಬಾಣ ಬಿಟ್ಟಾಗ ನೀರು ಚಿಮ್ಮಿದೆ ಎಂಬ ಪ್ರತೀತಿ ಇದೆ. ಬಂಡೆಯಿಂದ ಹರಿದು ಬರುವ ನೀರು ಸುಮಾರು ೨೦ ಕಿಮೀ ದೂರದ ಶಿರಸಿ ತಾಲೂಕು ಇಸಳೂರ ಕೆರೆಯಿಂದ ಹರಿದುಬರುತ್ತದೆ ಎನ್ನಲಾಗುತ್ತದೆ. ಅಲ್ಲದೇ ರಾಮ ಲಕ್ಷ್ಮಣ ಹಾಗೂ ಸೀತೆ ಈ ಸ್ಥಳಕ್ಕೆ ಬಂದು ಶಿವಲಿಂಗವನ್ನು ಪೂಜಿಸಿ ಹೋಗಿದ್ದರಿಂದ ಈ ದೇವಾಲಯಕ್ಕೆ ರಾಮಲಿಂಗೇಶ್ವರ ಎಂಬ ಹೆಸರು ಬಂದಿದೆ. ದೇವಾಲಯದ ಅಂಚಿನಲ್ಲಿಯೇ ಹಲವು ಋಷಿಮುನಿಗಳು ತಂಗಿ ತಪಸ್ಸು ಮಾಡಿದ ಕುರುಹುಗಳು ಲಬಿಸುತ್ತವೆ.

ಶಿವರಾತ್ರಿ ಉತ್ಸವ:

ಶಿವರಾತ್ರಿ ಜಾತ್ರಾ ಮಹೋತ್ಸವ ಫೆ. ೧೫ರಿಂದ ೨ ದಿನಗಳ ಕಾಲ ನಡೆಯಲಿದೆ. ೧೯೪೨ರಿಂದ ಪ್ರಾರಂಭವಾಗಿರುವ ಜಾತ್ರಾ ಮಹೋತ್ಸವಕ್ಕೆ ಸುತ್ತಲಿನ ಭಕ್ತರು ರಾಮಲಿಂಗೇಶ್ವರನಲ್ಲಿ ಭಕ್ತಿ ಇಟ್ಟು ನಡೆದುಕೊಳ್ಳುತ್ತಾರೆ. ಇಷ್ಟಸಿದ್ಧಿಗಳಿಗೆ ಹರಕೆ ತುಲಾಭಾರ ಅರ್ಪಿಸುತ್ತಾರೆ. ಬೆಳಗ್ಗೆ ಪ್ರಾರಂಭವಾಗುವ ಇಲ್ಲಿಯ ಜಾತ್ರೆ ಅಹೋರಾತ್ರಿ ನಡೆಯುತ್ತದೆ. ತಾಲೂಕು ಹಾಗೂ ಪಕ್ಕದ ಜಿಲ್ಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಮುಂಡಗೋಡ ಪಟ್ಟಣದಿಂದ ಶಿರಸಿ ಮಾರ್ಗವಾಗಿ ಮಳಗಿಗೆ ೨೫ ಕಿಮೀ ಅಲ್ಲಿಂದ ೧೦ ಕಿಮೀ ಹಾಗೂ ಶಿರಸಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಕಾಳೆಬೈಲ್ ಕ್ರಾಸ್‌ಗೆ ೨೩ ಕಿಮೀ ಅಲ್ಲಿಂದ ಅಡ್ಡ ರಸ್ತೆ ಮೂಲಕ ೫.೫ ಕಿಮೀ ಕ್ರಮಿಸಿದರೆ ಐತಿಹಾಸಿಕ ಬೆಡಸಗಾಂವ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯ ತಲುಪಬಹುದು.