ಸಾರಾಂಶ
-ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ಸಲಹೆ
------ಕನ್ನಡಪ್ರಭವಾರ್ತೆ, ಹಿರಿಯೂರು
ಸೂರ್ಯಕಾಂತಿ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಎಕರೆಗೆ 3 ರಿಂದ 4 ಜೇನುಪೆಟ್ಟಿಗೆಯನ್ನು ಇಡಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ರೈತರಿಗೆ ಸಲಹೆ ನೀಡಿದರು.ಹಿರಿಯೂರು ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹೈದರಾಬಾದ್‌ನ ಭಾರತೀಯ ಎಣ್ಣೆ ಕಾಳು ಬೆಳೆಗಳ ಸಂಶೋಧನಾ ಕೇಂದ್ರ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಸೂರ್ಯಕಾಂತಿ ಮತ್ತು ಹರಳು ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆಗಳ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೇಂಗಾ ನಂತರ ಸೂರ್ಯಕಾಂತಿ 3500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಪ್ರಸಕ್ತ ಮೊಗ್ಗು, ಹೂವು ಮತ್ತು ಕಾಳು ಕಟ್ಟುವ ಹಂತದಲ್ಲಿದೆ. ಕರ್ನಾಟಕವು ದೇಶದ ಶೇ.48 ಭಾಗ ಸೂರ್ಯಕಾಂತಿ ಉತ್ಪಾದನೆ ಮಾಡುತ್ತಿದ್ದು, ಅಗ್ರಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಸೂರ್ಯಕಾಂತಿ ಬೆಳೆ ವಿಸ್ತೀರ್ಣ ಕ್ಷೀಣಿಸುತ್ತಿದೆ. ಸೂರ್ಯಕಾಂತಿ ಎಣ್ಣೆಯ ಹೆಚ್ಚಿನ ಬೇಡಿಕೆಯಿಂದ ಉತ್ಪಾದನೆ ಹೆಚ್ಚಿಸುವುದು ಅವಶ್ಯಕವಾಗಿದೆ. ಕೇಂದ್ರ ಸರ್ಕಾರ ಪ್ರಸಕ್ತ ಹಂಗಾಮಿಗೆ ಸೂರ್ಯಕಾಂತಿ ಬೆಳೆಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ರು. 7280 ಅನ್ನು ನಿಗದಿಪಡಿಸಿದೆ ಎಂದರು.ಜಿಲ್ಲೆಯಲ್ಲಿ ಹರಳು ಬೆಳೆ 650 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬೆಳೆಯು ಬೆಳವಣಿಗೆ ಹಂತದಲ್ಲಿದೆ. ಇದನ್ನು ಮಿಶ್ರಬೆಳೆಯಾಗಿ (5 ಸಾಲು ಶೇಂಗಾ ಬೆಳೆ ನಂತರ 1 ಸಾಲು ಹರಳು) ಅಥವಾ ಏಕಬೆಳೆಯಾಗಿ ಅಥವಾ ಬದುಗಳ ಮೇಲೆ ಬೆಳೆಯಬಹುದಾಗಿದೆ. ಈ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರದ ರಾಷ್ಟ್ರೀಯಯ ಖಾದ್ಯ ತೈಲ ಎಣ್ಣೆ ಕಾಳು ಅಭಿಯಾನದಡಿ ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆಯ ನೂತನ ಅಲ್ಪಾವಧಿ ತಳಿಯಾದ ಕೆಬಿಎಸ್, ಹೆಚ್-78 ಮತ್ತು ಹರಳು ಬೆಳೆಯ ಸಂಕರಣ ತಳಿಗಳಾದ ಐಸಿಹೆಚ್-5, ಐಸಿಹೆಚ್-66ಗಳನ್ನು ಕ್ರಮವಾಗಿ 250 ಮತ್ತು 500 ಹೆಕ್ಟೇರ್ ಪ್ರದೇಶದಲ್ಲಿ ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಪ್ರಾತ್ಯಕ್ಷಿಗಳನ್ನು ಹಮ್ಮಿಕೊಂಡಿದ್ದು, ರೈತಬಾಂಧವರು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೂರ್ಯಕಾಂತಿ ತಳಿ ಅಭಿವೃದ್ಧಿ ವಿಜ್ಞಾನಿ ಡಾ. ಎಸ್.ಡಿ ನೆಹರು, ಕೃಷಿ ವಿಶ್ವವಿದ್ಯಾಲಯ ಬೇಸಾಯಶಾಸ್ತ್ರಜ್ಞ ಡಾ.ಕೆ.ಎಸ್ ಸೋಮಶೇಖರ್, ಕೆವಿಕೆ ಬಬ್ಬೂರು ಮುಖ್ಯಸ್ಥ ಡಾ. ಓ ಕುಮಾರ್, ಸಸ್ಯರೋಗ ಶಾಸ್ತ್ರಜ್ಞ ಡಾ.ಸಿ.ಪಿ ಮಂಜುಳ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎನ್.ಪಿ ಶಿವಶಂಕರ್ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದ ಆಸಕ್ತ 60 ಜನ ರೈತರು ಹಾಜರಿದ್ದರು.------------
ಪೋಟೋ:ಹಿರಿಯೂರು ತಾಲೂಕಿನ ಬಬ್ಬೂರು ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಸುಧಾರಿತ ಬೇಸಾಯ ತಾಂತ್ರಿಕತೆಗಳ ಕುರಿತ ತರಬೇತಿ ಕಾರ್ಯಕ್ರಮವನ್ನು ಆರ್.ರಜನಿಕಾಂತ ಉದ್ಘಾಟಿಸಿದರು.
----ಪೋಟೋ: 30ಸಿಟಿಡಿ1
--