ತಾಲೂಕಿನ ಅಡವಿಹುಳಗಬಾಳ ಗ್ರಾಮದ ಬೀರಪ್ಪನ ಬೆಟ್ಟದಲ್ಲಿ ನ.10ರಂದು ಬೀರಲಿಂಗೇಶ್ವರ, ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ಈ ವೇಳೆ 8 ಜೋಡಿಗಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ತಾಲೂಕು ಕುರುಬ ಸಮಾಜ ಅಧ್ಯಕ್ಷ ಹಾಗೂ ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನ ಅಡವಿಹುಳಗಬಾಳ ಗ್ರಾಮದ ಬೀರಪ್ಪನ ಬೆಟ್ಟದಲ್ಲಿ ನ.10ರಂದು ಬೀರಲಿಂಗೇಶ್ವರ, ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ಈ ವೇಳೆ 8 ಜೋಡಿಗಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ತಾಲೂಕು ಕುರುಬ ಸಮಾಜ ಅಧ್ಯಕ್ಷ ಹಾಗೂ ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.ಪಟ್ಟಣದ ಪಂಜುರ್ಲಿ ಸಭಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿ, ಜಾತ್ರೆಯಲ್ಲಿ ಜರುಗುವ ಸಾಮೂಹಿಕ ವಿವಾಹಗಳು ಸರ್ಕಾರದ ಆದೇಶದ ಪ್ರಕಾರ ನಡೆಯಲಿದೆ. ಈಗಾಗಲೇ 8 ಜೋಡಿಗಳಿಗೆ ವಿವಾಹದ ಸರ್ಕಾರಿ ಅಧಿಕಾರಿಗಳು ಅನುಮತಿ ನೀಡಿದ್ದು, ವಿವಾಹ ಕಚ್ಚುಕಟ್ಟಿನಿಂದ ನಡೆಯಲಿದೆ. ಕಳೆದ 20 ವರ್ಷಗಳಿಂದ ಜಾತ್ರೆ ನಡೆಯುತ್ತಿದೆ. ಈ ವರ್ಷ 8 ಜೋಡಿಗಳ ಸಾಮೂಹಿಕ ವಿವಾಹ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ಮುಖಂಡ ಮುತ್ತಣ್ಣ ಹುಂಡೇಕಾರ ಮಾತನಾಡಿ, ಜಾತ್ರೆಯು ಈ ವರ್ಷ ಅತೀ ವಿಜೃಂಭಣೆಯಿಂದ ಜರುಗಲಿದೆ. ಜಾತ್ರೆಗೆ ಸುತ್ತಮುತ್ತಲಿನ ತಾಲೂಕು ಸೇರಿದಂತೆ ಜಿಲ್ಲೆಗಳಿಂದ ಅಂದಾಜು 25 ಸಾವಿರ ಭಕ್ತರು ಆಗಮಿಸಲಿದ್ದಾರೆ. ಇದಕ್ಕೆ ಬೇಕಾದ ಸಕಲ ಸಿದ್ದತೆಯನ್ನು ಜಾತ್ರಾ ಕಮಿಟಿಯು ಕೈಗೊಂಡಿದೆ. ಜಾತ್ರೆಯಲ್ಲಿ ವಾಹನಕಾರರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚಕಟ್ಟಾಗಿ ನಿಭಾಯಿಸಲು ಸಮಿತಿ ರಚಿಸಲಾಗಿದೆ. ಅಲ್ಲದೇ, ಸ್ಥಳೀಯ ಪೊಲೀಸ್ ಇಲಾಖೆಯವರೂ ಹೆಚ್ಚಿನ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಸರೂರ ಶಾಖಾ ಮಠದ ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು ವಹಿಸಲಿದ್ದಾರೆ. ಅಂಕಲಿಮಠದ ವೀರಭದ್ರಸ್ವಾಮಿಗಳು, ತಾಳಿಕೋಟೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು, ಯರಝರಿ ಯಲ್ಲಾಲಿಂಗ ಮಠದ ಮಲ್ಲಾಲಿಂಗ ಮಹಾರಾಜರು, ತಿಂಥಣಿ ಬ್ರಿಜ್ ಕಾಗಿನೆಲೆ ಶಾಖಾ ಮಠದ ಸಿದ್ದಬೀರ ದೇವರು, ಸರೂರಿನ ಸಿದ್ದಯ್ಯ ಗುರುವಿನ, ಸಹದೇವಯ್ಯ ಗುರುವಿನ, ಕಿಲಾರಹಟ್ಟಿಯ ಕಾಡಸಿದ್ದೇಶ್ವರ ಮಠದ ರಮಾನಂದ ಮಹಾರಾಜರು, ಅರಳಿಚಂಡಿ ಯಲ್ಲಾಲಿಂಗ ಮಠದ ಪರಮಾನಂದ ಮಹಾರಾಜರು, ರೂಢಗಿ ಯಲ್ಲಾಲಿಂಗ ಮಠದ ಯಲ್ಲಾಲಿಂಗ ಮಹಾರಾಜರು ಜಾತ್ರಾ ಮಹೋತ್ಸವದ ಸಾನಿಧ್ಯವನ್ನು ವಹಿಸಲಿದ್ದಾರೆ.

ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹಾಗೂ ಶಾಸಕ ಉಮೇಶ ಮೇಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಜಿಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ ಜ್ಯೋತಿ ಬೆಳಗಿಸುವರು. ಅಧ್ಯಕ್ಷತೆಯನ್ನು ಅಡವಿ ಹುಲಗಬಾಳ, ಅಡವಿ ಸೋಮನಾಳ ಹಾಗೂ ಗೋನಾಳ ಗ್ರಾಮಸ್ಥರು ವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಬೀರಪ್ಪ ಹೊಕ್ರಾಣಿ, ಸಂಗಣ್ಣ ಪೂಜಾರಿ, ಗಂಗಪ್ಪ ಚಪ್ಪರ, ಮಲ್ಲಪ್ಪ ಗುಡಿಹಾಳ, ರಾಮನಗೌಡ ಪಾಟೀಲ, ನಿಂಗಪ್ಪ ಪೂಜಾರಿ, ಹಯಾಳಪ್ಪ ಕೆಂಭಾವಿ, ಪರಶುರಾಮ ನಾಗೂರ, ಸಿದ್ದಣ್ಣ ಪೂಜಾರಿ, ನಂದಪ್ಪಗೌಡ ಬಿರಾದಾರ, ಬಸಪ್ಪ ಗುರಿಕಾರ, ಮಲ್ಲಿಕಾರ್ಜುನ ಗುಳಬಾಳ, ಸಂಗಪ್ಪ ಬಿರಾದಾರ, ಯಮನಪ್ಪ ಗುಳಬಾಳ ಸೇರಿದಂತೆ ಅಡವಿ ಹುಲಗಬಾಳ, ಗೋನಾಳ, ಅಡವಿ ಸೋಮನಾಳ ಗ್ರಾಮದ ಪ್ರಮುಖರಿದ್ದರು.