ಕನ್ನಡಪ್ರಭ ವಾರ್ತೆ ಚಿಕ್ಕೋಡಿಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ. ಕಳೆದ ಸಾಲಿನಲ್ಲಿ ಅಭೂತಪೂರ್ವ ಆರ್ಥಿಕ ಪ್ರಗತಿ ಸಾಧಿಸಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ. ಕಳೆದ ಸಾಲಿನಲ್ಲಿ ಅಭೂತಪೂರ್ವ ಆರ್ಥಿಕ ಪ್ರಗತಿ ಸಾಧಿಸಿದೆ.ಸಂಸ್ಥೆಯು ₹51.04 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12ರಷ್ಟು ಷೇರು ಲಾಭಾಂಶ ಹಾಗೂ ಸಿಬ್ಬಂದಿಗೆ ಬೋನಸ್ ವಿತರಿಸಲು ನಿರ್ಧರಿಸಿದೆ. 1991ರಲ್ಲಿ ಸ್ಥಾಪನೆಯಾಗಿ, ಬಹುರಾಜ್ಯ ಸಹಕಾರಿ ಕಾಯ್ದೆ-2002ರ ಅಡಿಯಲ್ಲಿ ನೋಂದಾಯಿತಗೊಂಡಿರುವ ಸಂಸ್ಥೆಯು ಪ್ರಸ್ತುತ ಮೂರು ರಾಜ್ಯಗಳಲ್ಲಿ ಒಟ್ಟು 235 ಶಾಖೆಗಳನ್ನು ಹೊಂದಿದೆ. ಕರ್ನಾಟಕದಲ್ಲಿ 180, ಮಹಾರಾಷ್ಟ್ರದಲ್ಲಿ 50 ಹಾಗೂ ಗೋವಾದಲ್ಲಿ 5 ಶಾಖೆಗಳ ಮೂಲಕ ಸುಮಾರು 4.60 ಲಕ್ಷಕ್ಕೂ ಅಧಿಕ ಸದಸ್ಯರಿಗೆ ಸೇವೆ ಸಲ್ಲಿಸುತ್ತಿದೆ.
₹5,754.96 ಕೋಟಿ ಠೇವಣಿ ಸಂಗ್ರಹ: ಕಳೆದ ಸಾಲಿನಲ್ಲಿ ಸಂಸ್ಥೆಯು ₹5,754.96 ಕೋಟಿ ಠೇವಣಿ ಸಂಗ್ರಹಿಸಿದ್ದು, ₹4,121.05 ಕೋಟಿ ಸಾಲ ವಿತರಿಸಿದೆ. ಈ ಅವಧಿಯಲ್ಲಿ ₹51.04 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕ ಪ್ರಗತಿಯ ಹೊಸ ಮೈಲಿಗಲ್ಲು ಸ್ಥಾಪಿಸಿದೆ.4.08 ಲಕ್ಷ ಸದಸ್ಯರಿಗೆ ಶೇ.12ರಷ್ಟು ಲಾಭಾಂಶ: ವಾರ್ಷಿಕ ಸರ್ವಸಾಧಾರಣ ಸಭೆಯ ನಿರ್ಣಯದಂತೆ, 4,08,233 ಸದಸ್ಯರ ಒಟ್ಟು ₹34,92,16,400 ಷೇರು ಬಂಡವಾಳದ ಮೇಲೆ ಶೇ.12ರಷ್ಟು ಲಾಭಾಂಶವನ್ನು ಘೋಷಿಸಲಾಗಿದೆ. ಅದರಂತೆ ಒಟ್ಟು ₹4,19,05,968 ಲಾಭಾಂಶದ ಮೊತ್ತವನ್ನು ಸದಸ್ಯರ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗಿದೆ. ಸದಸ್ಯರು ತಮ್ಮ ಖಾತೆಗಳಿಂದ ಲಾಭಾಂಶದ ಮೊತ್ತವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.
1,476 ಸಿಬ್ಬಂದಿಗೆ ₹3.68 ಕೋಟಿ ಬೋನಸ್; ಸಂಸ್ಥೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 1,476 ಸಿಬ್ಬಂದಿಗೆ ಬೋನಸ್ ವಿತರಿಸಲಾಗುತ್ತಿದೆ. ನಿವ್ವಳ ಲಾಭದ ಶೇ.10ರಷ್ಟು ಮೊತ್ತವನ್ನು ಬೋನಸ್ ರೂಪದಲ್ಲಿ ಹಂಚಲಾಗುತ್ತಿದ್ದು, ಒಟ್ಟು ₹3,68,54,855 ವಿತರಿಸಲಾಗುತ್ತಿದೆ.ಜೊಲ್ಲೆ ದಂಪತಿ ಮಾರ್ಗದರ್ಶನದಲ್ಲಿ ಪ್ರಗತಿ: ಸಂಸ್ಥೆಯ ಸಂಸ್ಥಾಪಕರು, ಚಿಕ್ಕೋಡಿಯ ಮಾಜಿ ಸಂಸದರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಶಂಕರ ಜೊಲ್ಲೆ ಅವರ ನೇತೃತ್ವದಲ್ಲಿ ಮತ್ತು ಸಹಸಂಸ್ಥಾಪಕರು, ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕಿ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ.
ಸದಸ್ಯರ ವಿಶ್ವಾಸ, ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆಯೇ ಸಂಸ್ಥೆಯ ನಿರಂತರ ಪ್ರಗತಿಗೆ ಪ್ರಮುಖ ಕಾರಣಗಳಾಗಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ಸಮಸ್ತ ಸದಸ್ಯರು, ಹಿತೈಷಿಗಳು ಹಾಗೂ ಮಾಧ್ಯಮ ಮಿತ್ರರಿಗೆ ದಸರಾ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಯಾಸಿನ್ ತಾಂಬೂಲೆ ಮತ್ತು ಚೇತನ ದೇಶಪಾಂಡೆ, ಪ್ರಧಾನ ವ್ಯವಸ್ಥಾಪಕ ಬಹದ್ದೂರ ಗುರವ, ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ ಮತ್ತು ರಮೇಶ ಕುಂಬಾರ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ಶೇಖರ ಪಾಟೀಲ ಉಪಸ್ಥಿತರಿದ್ದರು.