ಸಾರಾಂಶ
ಶಿವಾನಂದ ಅಂಗಡಿಹುಬ್ಬಳ್ಳಿ: ಉತ್ತರ ಕರ್ನಾಟಕದ ಬಯಲು ಸೀಮೆಯ ವಾಣಿಜ್ಯ ಬೆಳೆ ಹೆಸರುಕಾಳು ಸುಗ್ಗಿ ಇನ್ನೂ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೆ, ಗದಗ ಎಪಿಎಂಸಿಯಲ್ಲಿ ಎರಡು ದಿನದಿಂದ ಕ್ವಿಂಟಲ್‌ಗೆ 10 ಸಾವಿರ ರು.ಗೆ ಮಾರಾಟವಾಗಿರುವುದು ಬೆಳೆಗಾರರು ಹುಬ್ಬೇರಿಸುವಂತೆ ಮಾಡಿದೆ.
ಎಂಟತ್ತು ದಿನಗಳ ಹಿಂದಷ್ಟೇ ಅಂದರೆ ಜುಲೈ 26ರ ವರೆಗೂ ಕ್ವಿಂಟಲ್‌ಗೆ ಬರೀ 6500 ರು.ಗೆ. ಮಾರಾಟವಾಗಿದೆ. ಆವಕ ಸಹ 100 ಕ್ವಿಂಟಲ್ ಆಚೆ, ಇಚೆ ಇತ್ತು. ಜು. 28ರಿಂದ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಒಂದೇ ವಾರದಲ್ಲಿ ಗುಣಮಟ್ಟದ ದೊಡ್ಡ ಕಾಳು ₹ 10 ಸಾವಿರ ದಾಟಿದೆ. ಆ. 8ರಂದು ಶುಕ್ರವಾರದಂದು ವರಮಹಾಲಕ್ಷ್ಮೀ ಪೂಜೆ ನಡೆಯಲಿದ್ದು, ಹಬ್ಬಕ್ಕೆ ಮುನ್ನ ಬೆಳೆಗಾರರಿಗೆ ಲಕ್ಷ್ಮೀ ಕಟಾಕ್ಷವಾಗಿರುವುದು ಮಣ್ಣಿನ ಮಕ್ಕಳಲ್ಲಿ ಸಂತಸ ಮೂಡಿಸಿದೆ.ಆ. 1ರಿಂದ ಆವಕ ಹೆಚ್ಚಾಗುತ್ತಿದ್ದು, ಸೋಮವಾರ ಗದಗ ಎಪಿಎಂಸಿಗೆ 886 ಕ್ವಿಂಟಲ್ ಹೆಸರು ಆವಕವಾಗಿದ್ದು, 10,009ರ ವರೆಗೆ ಮಾರಾಟವಾಗಿದೆ. ಮಂಗಳವಾರ 1154 ಕ್ವಿಂಟಲ್ ಆವಕವಾಗಿದ್ದು, 10,209 ರು.ವರೆಗೂ ಮಾರಾಟವಾಗಿದೆ.
75ರಿಂದ 80 ದಿನಕ್ಕೆ ಹೆಸರು ಕಾಳು ಕೊಯ್ಲಿಗೆ ಬರುತ್ತದೆ. ಆದರೆ ಈ ಬಾರಿ ಕೃತಿಕಾ ಮಳೆ ಭರಪೂರ ಸುರಿದ ಹಿನ್ನೆಲೆಯಲ್ಲಿ ಮೇ ಕೊನೆ ವಾರದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಕೆಲವೆಡೆ ಹೆಸರು ಕೊಯ್ಲಿಗೆ ಬಂದಿದ್ದು, ಸುಗ್ಗಿ ಆರಂಭವಾಗಿದೆ. ಪೂರ್ಣಪ್ರಮಾಣದಲ್ಲಿ ಆರಂಭವಾಗಲು ಇನ್ನು 10 ದಿನಗಳಾದರೂ ಬೇಕು.ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 81,081 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ. ಅಣ್ಣಿಗೇರಿ, ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಹೆಸರು ಗುರಿ ಮೀರಿ ಬಿತ್ತನೆಯಾಗಿದೆ.
10 ದಿನ ಮೊದಲೇ ಸುಗ್ಗಿ:ರೋಣ ತಾಲೂಕಿನಲ್ಲಿ 10 ದಿನ ಮೊದಲೇ ಸುಗ್ಗಿ ಆರಂಭವಾಗಿದ್ದು, ನಿಡಗುಂದಿ, ಮಾರನಬಸರಿ, ಇಟಗಿ, ಹಿರೇಹಾಳ, ಕೊತಬಾಳ ಗ್ರಾಮಗಳಲ್ಲಿ ಹೆಸರು ಕಾಳು ಕೊಯ್ಲಿಗೆ ಬಂದಿದ್ದು, ಆ. 2ರಿಂದಲೇ ಮಾರುಕಟ್ಟೆಗೆ ಆವಕ ಸಹ ಆರಂಭವಾಗಿದೆ.ಇಳುವರಿ ಕುಸಿತ: ಮೇ ಕೊನೆಯ ವಾರದಲ್ಲಿಯೇ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಬಳಿಕ ಮಳೆ ಸರಿಯಾಗಿ ಆಗಲಿಲ್ಲ. ಸೀರು ಬಾಧೆ, ಕೀಟ, ಬೂದುರೋಗದಿಂದಾಗಿ ಇಳುವರಿಗೆ ಬಹಳ ಹೊಡೆತ ಬಿದ್ದಿದ್ದು, ಎಕರೆಗೆ ಒಂದೂವರೆಯಿಂದ 2 ಕ್ವಿಂಟಲ್ ವರೆಗೆ ಮಾತ್ರ ಇಳುವರಿ ಬಂದಿದೆ ಎನ್ನುತ್ತಾರೆ ರೋಣ ತಾಲೂಕಿನ ಮುಗಳಿ ಗ್ರಾಮದ ರೈತ ಶರಣಪ್ಪ ಮುಲ್ಲಾಪುರ.
ಗದಗ, ಧಾರವಾಡ, ಬಾಗಲಕೋಟೆ, ಕೊಪ್ಪಳದ ವಿವಿಧ ತಾಲೂಕುಗಳಲ್ಲಿ ಹೆಸರು ಕಾಳು ಬೆಳೆಯುತ್ತಾರೆ. ಎಲ್ಲ ಎಪಿಎಂಸಿಗಳಲ್ಲಿ ಬೆಲೆ ₹ 10 ಸಾವಿರ ದಾಟದಿದ್ದರೂ ದರ ಏರುಮುಖವಾಗಿರುವುದು ಬೆಳೆಗಾರರಿಗೆ ನಿರೀಕ್ಷೆ ಹುಟ್ಟಿಸಿದೆ.2023ರ ಆಗಸ್ಟ್ ಕೊನೆ ವಾರದಲ್ಲಿ ಕ್ವಿಂಟಲ್‌ಗೆ 10 ಸಾವಿರದಿಂದ 11 ಸಾವಿರ ವರೆಗೂ ಮಾರಾಟವಾಗಿ, ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಲಾಭ ಪಡೆದುಕೊಂಡಿದ್ದರು. ಬಳಿಕ 10 ಸಾವಿರ ರು. ಧಾರಣೆ ಬಂದಿರಲಿಲ್ಲ. ಕಳೆದ ಬಾರಿಯಂತೂ ₹ 7ರಿಂದ 7500 ದಾಟಿ ಮಾರಾಟವಾಗಿರಲಿಲ್ಲ. ಈಗ ಸುಗ್ಗಿಯ ಆರಂಭಕ್ಕೆ ಮುನ್ನ ದರ ಹೆಚ್ಚಳವಾಗಿರುವುದು ಬೆಳೆಗಾರರಿಗೆ ಸಂತಸ ಮೂಡಿಸಿದೆ.ಆಗಸ್ಟ್ ಮೂರನೇ ವಾರದಿಂದ ಭರಪೂರ ಸುಗ್ಗಿ ಆರಂಭವಾಗಲಿದ್ದು, ಎಲ್ಲ ಎಪಿಎಂಸಿಗಳಿಗೂ ಭರಪೂರ ಹೆಸರು ಆಗಮಿಸಲಿದೆ. ಸೆಪ್ಟೆಂಬರ್, ಅಕ್ಟೋಬರ್ ವರೆಗೂ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಎಪಿಎಂಸಿಗಳಿಗೆ ಆಗಮಿಸಲಿದ್ದು, ವಹಿವಾಟು ಹೆಚ್ಚಿಸಲಿದೆ.
ಗದಗ ಎಪಿಎಂಸಿಗೆ ಅಲ್ಲಿ ಎಲ್ಲ ತಾಲೂಕುಗಳು ಸೇರಿ ಕೊಪ್ಪಳ, ಧಾರವಾಡ ಜಿಲ್ಲೆಯ ಹೆಸರು ಕಾಳು ಆವಕವಾಗುತ್ತಿದ್ದು, ಪ್ರತಿ ವರ್ಷ ಭಾರೀ ಪ್ರಮಾಣದಲ್ಲಿ ಹೆಸರು ಆವಕವಾಗುತ್ತದೆ. ಹೀಗಾಗಿ ಹೆಸರು ಆವಕದಲ್ಲಿ ರಾಜ್ಯದಲ್ಲಿ ಗದಗ ಎಪಿಎಂಸಿಗೆಯೇ ನಂಬರ್ ಒನ್ ಸ್ಥಾನದಲ್ಲಿದೆ.ಸುಗ್ಗಿಗೆ ಮುನ್ನವೇ ಹೆಸರು ಕಾಳಿಗೆ 10 ಸಾವಿರ ರು. ದರ ಬಂದಿರುವುದು ಖುಷಿಯ ವಿಚಾರ. ಧಾರವಾಡ ಜಿಲ್ಲೆಯಲ್ಲಿ ಸಹ ಮೊದಲು ಬಿತ್ತಿದ ಹೆಸರು ಈಗ ಸುಲಿಗಾಯಿ ಹಂತದಲ್ಲಿದೆ. 8-10 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಮಳೆ ಬಿಡುವು ಕೊಟ್ಟರೆ ಬಂಪರ್ ಇಳುವರಿ ನಿರೀಕ್ಷೆ ಇದೆ. ಜತೆಗೆ ಹಿಂದೆ ಬಿತ್ತಿದ ಹೆಸರು ಬೆಳೆಗೆ ಕೀಟ ಸೇರಿ ನಂಜಾಣು ರೋಗ ಬಾಧೆ ತಗುಲಿದ್ದು, ಹತೋಟಿಗೆ ಕ್ರಮಗಳನ್ನು ತಿಳಿಸಿದ್ದೇವೆ ಎಂದು ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.
ಎರಡು ಎಕರೆ ಪ್ರದೇಶದಲ್ಲಿ ಹೆಸರು ಬೆಳೆದಿದ್ದೆ, ಮೂರುವರೇ ಕ್ವಿಂಟಲ್‌ನಷ್ಟು ಬಂದಿದೆ. ಕೀಟಬಾಧೆ, ನಂಜಾಣು ರೋಗದಿಂದ ಈ ಬಾರಿ ಇಳುವರಿ ಕಡಿಮೆ ಬಂದಿದೆ. ಕ್ವಿಂಟಲ್‌ಗೆ ₹ 8291 ವರೆಗೆ ಮಾರಾಟ ಮಾಡಿದ್ದೇವೆ. ದೊಡ್ಡ ಕಾಳಿಗೆ ಮಾತ್ರ 10 ಸಾವಿರ ರು. ಧಾರಣೆ ದೊರೆತಿದ್ದು, ಇಂಥ ಗುಣಮಟ್ಟದ ಕಾಳು ಸಹ ನಮ್ಮದು ಇರಲಿಲ್ಲ ಎಂದು ಕವಲೂರು ಗ್ರಾಮದ ರೈತ ಶಂಕರಪ್ಪ ಕುಕನೂರು, ಕವಲೂರು ಹೇಳಿದರು.