ಹುಲಿಗೆಮ್ಮ ದೇವಸ್ಥಾನದಲ್ಲಿ ಹೆಜ್ಜೆಗೊಬ್ಬರು ಭಿಕ್ಷುಕರು

| Published : Aug 20 2025, 01:30 AM IST

ಸಾರಾಂಶ

ಹುಲಿಗೆಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ ಬರೋಬ್ಬರಿ ಸಾವಿರಕ್ಕೂ ಅಧಿಕ ಭಿಕ್ಷುಕುರು ಇದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ದಿನಗಳಲ್ಲಿ ಇವರ ಸಂಖ್ಯೆ ದುಪ್ಪಟ್ಟು ಆಗುತ್ತದೆ. ದೇವಸ್ಥಾನಕ್ಕೆ ಬರುವ ಅಧಿಕಾರಿಗಳಿಂದ ಹಿಡಿದು, ಶಾಸಕರು, ಸಚಿವರನ್ನು ಸಹ ಈ ಭಿಕ್ಷುಕರು ಬೇಡುತ್ತಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಮುನಿರಾಬಾದ್ ಸಮೀಪದ ಸುಪ್ರಸಿದ್ಧ ಹುಲಗಿಯ ಹುಲಿಗೆಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ಹೆಜ್ಜೆಗೊಬ್ಬರು ಭಿಕ್ಷುಕರಿದ್ದಾರೆ. ಮಕ್ಕಳಿಗೆ ಮತ್ತಿನೌಷಧಿ ಕೊಟ್ಟು ಕಂಕಳಲ್ಲಿ ಇಟ್ಟುಕೊಂಡು ಭೀಕ್ಷೆ ಬೇಡುತ್ತಿದ್ದು ಇದು ಭಕ್ತರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ..

ಹುಲಿಗೆಮ್ಮ ದೇವಸ್ಥಾನಕ್ಕೆ ನಿತ್ಯವೂ ಹತ್ತಾರು ಸಾವಿರ ಭಕ್ತರು ಆಗಮಿಸುತ್ತಾರೆ ಮತ್ತು ವಿಶೇಷ ದಿನಗಳಲ್ಲಿ 30ರಿಂದ 40 ಸಾವಿರ ಭಕ್ತರು ಬರುತ್ತಾರೆ. ಹೀಗೇ ಬಂದ ಭಕ್ತರನ್ನು ಅಡ್ಡ ಹಾಕಿ ಕಾಡಿ ಬೇಡಿ ಭಿಕ್ಷೆ ಬೇಡುತ್ತಿದ್ದಾರೆ. ಇದು ಭಕ್ತರಿಗೆ ಕಿರಿಕಿರಿಯಾಗಿದೆ.

ಸಾವಿರಕ್ಕೂ ಅಧಿಕ ಭಿಕ್ಷುಕರು:

ಹುಲಿಗೆಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ ಬರೋಬ್ಬರಿ ಸಾವಿರಕ್ಕೂ ಅಧಿಕ ಭಿಕ್ಷುಕುರು ಇದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ದಿನಗಳಲ್ಲಿ ಇವರ ಸಂಖ್ಯೆ ದುಪ್ಪಟ್ಟು ಆಗುತ್ತದೆ. ದೇವಸ್ಥಾನಕ್ಕೆ ಬರುವ ಅಧಿಕಾರಿಗಳಿಂದ ಹಿಡಿದು, ಶಾಸಕರು, ಸಚಿವರನ್ನು ಸಹ ಈ ಭಿಕ್ಷುಕರು ಬೇಡುತ್ತಾರೆ. ಆದರೂ ಸಹ ಇವರ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಭಿಕ್ಷುಕರ ಸಂಖ್ಯೆ ಏರುತ್ತಲೇ ಸಾಗಿದೆ.

ಮಕ್ಕಳಿಗೆ ಮತ್ತಿನೌಷಧಿ:

ಇಲ್ಲಿ ಭಿಕ್ಷೆ ಬೇಡುವ ಬಹುತೇಕರು ವರ್ಷದ ಕೂಸಿನಿಂದ ಹಿಡಿದ ನಾಲ್ಕು ವರ್ಷದ ಮಕ್ಕಳನ್ನು ಕಂಕುಳದಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುತ್ತಾರೆ. ಆ ಮಕ್ಕಳು ಯಾವುದೇ ರೀತಿಯ ತೊಂದರೆ ಕೊಡದಿರಲಿ ಎಂದು ಮತ್ತಿನೌಷಧಿ ನೀಡುತ್ತಾರೆ. ಹೀಗೇ ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷೆ ಬೇಡಿದರೆ ಹೆಚ್ಚಿನ ಸಂಪಾದನೆ ಮಾಡಬಹುದು ಎಂಬುದು ಅವರ ಲೆಕ್ಕಾಚಾರ.

ಬಾಡಿಗೆ ಮಕ್ಕಳು:

ಭಿಕ್ಷಾಟನೆಗೆ ಬರುವಾಗ ಇವರು ವಾಸಿಸುವ ಅಕ್ಕಪಕ್ಕದ ಮಕ್ಕಳನ್ನು ಬಾಡಿಗೆ ಪಡೆದು ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ತಾವೇ ಭಿಕ್ಷೆ ಬೇಡದರೆ ಹೆಚ್ಚಿನ ಹಣ ಸಿಗುವುದಿಲ್ಲವೆಂದು ಮಗುವಿನ ಪಾಲಕರಿಗೆ ಇಂತಿಷ್ಟು ಹಣವೆಂದು ಕೊಟ್ಟು ಇಡೀ ದಿನ ಕರೆದುಕೊಂಡು ಬರುತ್ತಾರೆ. ಈ ವಿಷಯವನ್ನು ಸ್ವತಃ ಭಿಕ್ಷುಕಿಯೇ ಹೇಳಿದ್ದಾಳೆ. ಹೀಗೆ ದೇವಸ್ಥಾನ ಸೇರಿದಂತೆ ವಿವಿಧೆಡೆ ಭಿಕ್ಷಾಟನೆ ನಡೆಯುತ್ತಿದ್ದರೂ ಕಡಿವಾಣ ಹಾಕಬೇಕಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಗ್ಯಾರಂಟಿ ನಡುವೆಯೂ ನಿಲ್ಲದ ಭಿಕ್ಷಾಟನೆ

ರಾಜ್ಯ ಸರ್ಕಾರ ಬಡವರು ಆರ್ಥಿಕ ಸಬಲರಾಗಲಿ ಎಂದು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ದೇವಸ್ಥಾನದಲ್ಲಿ ಭಿಕ್ಷೆ ಬೇಡುವವರಿಗೆ ಆ ಯೋಜನೆಗೆ ಬೇಕಾದ ದಾಖಲೆಗಳು ಇಲ್ಲದೆ ಪರಿಣಾಮ ಆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ನಾವು ಭಿಕ್ಷೆ ಬೇಡುವುದು ಅನಿವಾರ್ಯವಾಗಿದೆ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರ ಇಲ್ಲ. ಸದ್ಯ ಬಳ್ಳಾರಿಯಲ್ಲಿ ಇದೆ. ಭಿಕ್ಷುಕರ ಕಂಡುಬಂದರೆ ಅವರಿಗೆ ಮಾಹಿತಿ ನೀಡಿ ಅವರನ್ನು ರಕ್ಷಣೆ ಮಾಡುತ್ತೇವೆ.

ಅಜ್ಜಪ್ಪ ಜಿಲ್ಲಾಧಿಕಾರಿ ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ.