ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಪಟ್ಟಣದಲ್ಲಿ ಮುಸ್ಲಿಂ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಮೂವರು ಹಿಂದೂ ಯುವಕರನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ಜರುಗಿದೆ. ಸಮಾಜದಲ್ಲಿ ಸಂಪಾದನೆಗಾಗಿ ಮನುಷ್ಯ ನಾನಾ ರೀತಿಯ ವೇಷಧರಿಸುತ್ತಾರೆ. ಆದರೆ ಕೊಳ್ಳೇಗಾಲದ ಪಟ್ಟಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪರೂಪದ ಪ್ರಕರಣ ಕಂಡು ಪೊಲೀಸರು ಮಾತ್ರವಲ್ಲ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಟ್ಟಣದ ಮಸೀದಿಯ ಮುಂದೆ ಅಪ್ಪಟ ಮುಸ್ಲಿಂ ವೇಷ ಧರಿಸಿದ್ದ ಹಿಂದೂ ಯುವಕರು ಭಿಕ್ಷೆ ಬೇಡುವ ಮೂಲಕ ಮುಸ್ಲಿಮರೆ ನಾಚುವಂತೆ ನಟನೆ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಬೆಳಗ್ಗೆ 9ಗಂಟೆಯಲ್ಲಿ ಕೊಳ್ಳೇಗಾಲ ಬಸ್ ನಿಲ್ದಾಣ ಹಾಗೂ ಮಸೀದಿಗಳ ಮುಂದೆ ಮುಸ್ಲಿಮರ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದರು . ಇವರು ಕಿವಿಗೆ ಓಲೆ, ಕೈಗೆ ಬಳೆ ಹಾಕಿಕೊಂಡಿರುವುದು ಮುಸ್ಲಿಂ ಯುವಕರಿಗೆ ಅನುಮಾನ ಬಂದು ಮೂವರನ್ನು ಕರೆದುಕೊಂಡು ಹೋಗಿ ವಿಚಾರಿಸಿದಾಗ ನಾವು ಗುಲ್ಬರ್ಗ ಜಿಲ್ಲೆ, ಬೊಮ್ಮನಾಬಾದ್ ಕಡೆಯವರು ನಮ್ಮ ಹೆಸರು ಬಾಲಾಜಿ, ಬಾಬು ರಾಜು. ನಾವು ಮುಸ್ಲಿಮರಲ್ಲ ಹಿಂದೂಗಳು ಬಡತನದ ಕಾರಣ ಈ ರೀತಿ ವೇಷ ಧರಿಸಿ ಭಿಕ್ಷೆ ಮಾಡುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ನಂತರ ಪಟ್ಟಣದ ಮುಖಂಡ ಯುನಸ್ ಪಟ್ಟಣ ಠಾಣೆ ಪಿಎಸ್ಐ ಮಹೇಶ್ ಕುಮಾರ್‌ಗೆ ವಿಷಯ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ಬಳಿಕ ಮೂವರನ್ನು ಗುಲ್ಬರ್ಗಾ ಕ್ಕೆ ಹೋಗಲು ಹಣಕಾಸಿನ ವ್ಯವಸ್ಥೆ ಮಾಡಿ ಕಳುಹಿಸಲಾಯಿತು.