ಭಿಕ್ಷಾಟನೆ ಮುಕ್ತ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆ ನಿಟ್ಟಿನಲ್ಲಿ ಅನಿರೀಕ್ಷಿತ ದಾಳಿ ಆಯೋಜಿಸಲಾಗಿತ್ತು. ಇದರಲ್ಲಿ 16 ಜನ ಭಿಕ್ಷುಕರನ್ನು ರಕ್ಷಣೆ ಮಾಡಲಾಗಿದೆ.
ಕೊಪ್ಪಳ: ಭಿಕ್ಷಾಟನೆ ಮುಕ್ತ ಶ್ರೀ ಗವಿಸಿದ್ದೇಶ್ವರ ಜಾತ್ರೆ ನಿಟ್ಟಿನಲ್ಲಿ ಅನಿರೀಕ್ಷಿತ ದಾಳಿ ಆಯೋಜಿಸಲಾಗಿತ್ತು. ಇದರಲ್ಲಿ 16 ಜನ ಭಿಕ್ಷುಕರನ್ನು ರಕ್ಷಣೆ ಮಾಡಲಾಗಿದೆ.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘ, ಭಿಕ್ಷುಕರ ಪುರ್ನವಸತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕಾರ್ಯಾಚರಣೆ ನಡೆಯಿತು.ಈ ದಾಳಿಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975ರನ್ವಯ ಯಾರೇ ವ್ಯಕ್ತಿ ಭಿಕ್ಷೆ ಬೇಡುವುದು ಅಪರಾಧವಾಗಿದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ, ರಕ್ಷಿಸಿ, ನಿರ್ಗತಿಕರ ಪುರ್ನವಸತಿ ಕೇಂದ್ರದಲ್ಲಿರಿಸಿ ಅಗತ್ಯ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು.
ಈ ಕೃತ್ಯಕ್ಕೆ 7ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಬಹುದಾಗಿದೆ. ಆದ್ದರಿಂದ ಯಾರೇ ವ್ಯಕ್ತಿಗಳು, ಭಿಕ್ಷುಕರಿಗೆ ಮತ್ತು ಮಕ್ಕಳಿಗೆ ಭಿಕ್ಷೆ ನೀಡದೆ, ಅಂತಹವರನ್ನು ಅರ್ಹ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಿ ಅಥವಾ ತುರ್ತು ಸಹಾಯವಾಣಿಗಳಾದ 112 ಅಥವಾ ಮಕ್ಕಳ ಸಹಾಯವಾಣಿ-1098ಗೆ ಮಾಹಿತಿ ನೀಡಿ ಎಂದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿ, ಮಕ್ಕಳು ಭಿಕ್ಷೆ ಬೇಡುವುದನ್ನು ಸರ್ಕಾರ ನಿಷೇಧಿಸಿದ್ದು, ಇದೊಂದು ಅನಿಷ್ಟ ಪದ್ಧತಿಯಾಗಿದೆ. ಅಂತಹ ಮಕ್ಕಳನ್ನು ಸಹ ಪೋಷಣೆ ಮತ್ತು ರಕ್ಷಣೆ ವ್ಯಾಪ್ತಿಗೆ ಸೇರಿಸಿದೆ. ಇಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸುವ ಮೂಲಕ ಅಗತ್ಯ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು.
ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ, ಬಳ್ಳಾರಿ ಭಿಕ್ಷುಕರ ಪುರ್ನವಸತಿ ಕೇಂದ್ರದ ಅಧೀಕ್ಷಕ ಚಿನ್ನಪಾಲಯ್ಯ ಮತ್ತು ಸಿಬ್ಬಂದಿ, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಶರಣಪ್ಪ ಚವ್ಹಾಣ ಮತ್ತು ಸ್ವಯಂ ಸೇವಕರು, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರಿಯದರ್ಶಿನಿ ಮುಂಡರಗಿಮಠ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಸಾಂಸ್ಥಿಕ) ರವಿಕುಮಾರ, ಮಕ್ಕಳ ಸಹಾಯವಾಣಿ-1098ನ ಶರಣಪ್ಪ ಸಿಂಗನಾಳ ಮತ್ತು ಸಿಬ್ಬಂದಿಗಳಿದ್ದರು. ಈ ವೇಳೆ 16 ಜನ ಭಿಕ್ಷುಕರನ್ನು ರಕ್ಷಿಸಿ ಬಳ್ಳಾರಿ ಪುರ್ನವಸತಿ ಕೇಂದ್ರಕ್ಕೆ ಹಾಜರು ಪಡಿಸಲಾಯಿತು.