ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಇವರ ಸಯುಕ್ತ ಆಶ್ರಯದಲ್ಲಿ ಶನಿವಾರ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮಾರಕ ದತ್ತಿ ಮತ್ತು ಎಸ್ ಎಸ್ ರಾಮಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮ ಎಕ್ಸೆಲ್ ಶಾಲೆಯಲ್ಲಿ ಆಯೋಜಿಸಲಾಯಿತು.
ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕರಾದ ತಿಮ್ಮಯ್ಯ ಸಿ ಕೆ ಅವರು ಕೊಡಗಿನ ಸಾಹಿತಿಗಳು ಹಾಗೂ ವೀರ ಸೇನಾನಿಗಳಾದ ಜನರಲ್ ತಿಮ್ಮಯ್ಯ ಕಾರ್ಯಪ್ಪ ಅವರ ಕುರಿತು ಉಪನ್ಯಾಸ ನೀಡುತ್ತಾ ವಿದ್ಯಾರ್ಥಿಗಳಿಗೆ ವಿಭಿನ್ನ ಚಟುವಟಿಕೆಗಳ ಮೂಲಕ ರಸಪ್ರಶ್ನೆಯನ್ನು ಕೇಳುತ್ತಾ ಮನರಂಜನೆಯೊಂದಿಗೆ ವಿಜೇತರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.ಮುಂಬರುವ ದಿನಗಳಲ್ಲಿ ಇದೇ ಶಾಲೆಯಲ್ಲಿ ಅವರು ಕೋಟ್ಯಾಧಿಪತಿ ಎನ್ನುವ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ತಿಳಿಸಿದರು.
ಇನ್ನೊಬ್ಬರು ಅತಿಥಿ ಶಿಕ್ಷಕಿ ಶೋಭಿತ ಕೆ.ಡಿ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕನ್ನಡದ ಕವಿಗಳ ಕೊಡುಗೆ ಈ ಕುರಿತು ಮಾತನಾಡುತ್ತಾ ಕನ್ನಡ ಸಾಹಿತ್ಯದ ಪ್ರಾಚೀನತೆ ಕ್ರಿಸ್ತ ಶಕ 8 ರಿಂದ 9ನೆಯ ಶತಮಾನಕ್ಕೆ ಮೊದಲು ಸಾಹಿತ್ಯಕ ಸಾಕ್ಷಿಗಳು ಇಲ್ಲದಿರುವುದರಿಂದ ಕನ್ನಡ ಸಾಹಿತ್ಯದ ಪ್ರಾರಂಭ ಅಸ್ಪಷ್ಟತೆಯಲ್ಲಿ ಮುಚ್ಚಿಹೋಗಿದೆ. ಏಕೆಂದರೆ ಕೆಲವೇ ಶಾಸನ ಪುರಾವೆಗಳು ಲಭ್ಯವಿದ್ದು ಇತಿಹಾಸದ ಪ್ರಾರಂಭಿಕ ಹಂತಗಳಿಗೆ ಸೇರಿದ ಬಹುತೇಕ ಶಾಸನಗಳನ್ನು ಬ್ರಾಹ್ಮಿ ಲಿಪಿ ಹಾಗು ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ ಅವುಗಳಲ್ಲಿ ಬಹು ಪಾಲು ವೀರರಿಗೆ ಗೌರವ ಸಲ್ಲಿಸುವ ಕಿರು ಸ್ಮಾರಕ ದಾಖಲೆಗಳಾಗಿವೆ ಎಂದರು. ಅವರು ಹಲ್ಮಿಡಿ ಶಾಸನ, ಪ್ರಾರಂಭಿಕ ಸಾಹಿತ್ಯ ಕೃತಿಗಳು, ವಿರೋಚಿತ ಹಾಗೂ ಮಹಾಕಾವ್ಯದ ಯುಗ, ಧಾರ್ಮಿಕ ಪ್ರಚಾರದ ಯುಗ, ಪ್ರತಿಭಟನಾ ಯುಗ, ವೈಭವದ ಯುಗ , ಪುನರು ಜೀವನ ಯುಗ, ಹಳೆ ಹಾಗೂ ನಡುಕನ್ನಡ ಸಾಹಿತ್ಯ, ನವೋದಯ, ಮಕ್ಕಳ ಸಾಹಿತ್ಯ ,ಜಾನಪದ ಸಾಹಿತ್ಯ ,ಕನ್ನಡ ಭಾಷಾಭಿವೃದ್ಧಿ , ನವ್ಯ ಕಾವ್ಯದ ಕಾಲ, ದಲಿತ ಮತ್ತು ಬಂಡಾಯ ಸಾಹಿತ್ಯ, ಆಧುನಿಕ ಸಾಹಿತ್ಯ ಮತ್ತು ಪ್ರತಿಭಟನೆ, ಕನ್ನಡ ಕಾವ್ಯದ ಸುವರ್ಣ ಯುಗ ಸೇರಿದಂತೆ ಹಳೆಗನ್ನಡ ಮತ್ತು ಹೊಸಗನ್ನಡದ ಕವಿವರ್ಯರ ಕುರಿತು ವಿದ್ಯಾರ್ಥಿಗಳ ಮನಮುಟ್ಟುವಂತೆ ಉಪನ್ಯಾಸ ನೀಡಿದರು.ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಅವರು ಪ್ರಾಥಮಿಕವಾಗಿ ಮಾತನಾಡಿ, ತಮ್ಮ ಬದುಕಿನಲ್ಲಿ ಮಾಡಿದ ಸಾಧನೆ ಹಾಗೂ ಅವರು ಹಾಕಿಕೊಟ್ಟ ಮಾರ್ಗದರ್ಶನದ ನೆನಪಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪನೆ ಮಾಡಿರುವ ದತ್ತಿ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಪರಿಷತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಂತಹ ದತ್ತಿ ಕಾರ್ಯಕ್ರಮಗಳಿಂದ ಹಲವಾರು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಹೊರ ಸೂಸಲು ಉತ್ತಮ ವೇದಿಕೆ ಸಿಕ್ಕಂತಾಗುತ್ತದೆ. ಆದುದರಿಂದ ದತ್ತಿ ಸ್ಥಾಪನೆ ಮಾಡಲು ಕಾರಣ ಬೇಕಾಗಿಲ್ಲ. ಕನ್ನಡದ ಬಗ್ಗೆ ಒಲವಿದ್ದರೆ ಸಾಕು ಎಂದರು. ಇದೇ ಸಂದರ್ಭ ಶಾಲೆಯ ಪ್ರತಿಯೊಬ್ಬ ಶಿಕ್ಷಕರರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿರುವುದಕ್ಕಾಗಿ ಅಭಿನಂದಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಚೋಕಿದ ತಮ್ಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಪರಿಷತ್ತಿಗೆ ಅಭಿನಂದನೆ ಸಲ್ಲಿಸಿದರು.ಶಾಲೆಯ ವಕ್ತಾರರಾದ ವಿದ್ಯಾ ಸುರೇಶ್ ಅವರು ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಭಾಕರ ಪಿ.ವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭ ನಾಪೋಕ್ಲು ಹೋಬಳಿ ಗೌರವ ಕಾರ್ಯದರ್ಶಿ ಉಮಾ ಪ್ರಭು, ನಿವೃತ್ತ ಶಿಕ್ಷಕಿ ಅಮೆ ಭವಾನಿ ಶಾಲಾ ಶಿಕ್ಷಕವೃಂದ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಶರಣ್ಯ ಎಂ. ಸ್ವರಚಿತ ಕವನ ವಾಚಿಸಿದರು. ಶಿಕ್ಷಕಿ ರಶ್ಮಿ ಬಿ.ಸಿ. ಸ್ವಾಗತಿಸಿ, ಪ್ರಿಯಾಂಕಾ ಬಿ ಕಾರ್ಯಕ್ರಮ ನಿರೂಪಿಸಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಾಳೆಯಡ ದಿವ್ಯ ಮಂದಪ್ಪ ವಂದಿಸಿದರು.