ಕಾಪು: ಪ್ರಸಿದ್ಧ ಸುಗ್ಗಿ ಮಾರಿಪೂಜೆ ಜಾತ್ರೆ ಆರಂಭ

| Published : Mar 27 2024, 01:09 AM IST

ಸಾರಾಂಶ

ಕಾಪುವಿನ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಕಾಪು

ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಪುವಿನ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕಾಪು ಶ್ರೀ ಹಳೆ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ನಡೆಯುವ ಸುಗ್ಗಿ ಮಾರಿಪೂಜೆಗಾಗಿ ಮೂರೂ ಮಾರಿಗುಡಿಗಳನ್ನು ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರದೊಂದಿಗೆ ಅಲಂಕರಿಸಲಾಗಿದ್ದು ಭಕ್ತರ ಕಣ್ಮನ ಸೆಳೆಯುತ್ತಿವೆ.

ಈ ಮಾರಿಗುಡಿಗಳಲ್ಲಿ ನಡೆಯುವ ಸುಗ್ಗಿ, ಆಟಿ ಮತ್ತು ಜಾರ್ದೆ ಮಾರಿಪೂಜೆಗಳ ಪೈಕಿ ಸುಗ್ಗಿ ಮಾರಿಪೂಜೆಯು ಅತ್ಯಂತ ವಿಶೇಷದ್ದಾಗಿದೆ. 2 ದಿನಗಳ ಕಾಲ ನಡೆಯುವ ಮಾರಿಪೂಜೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಮಾತ್ರವಲ್ಲದೇ ದೂರದ ಮುಂಬಯಿ, ಬೆಂಗಳೂರು ಸೇರಿದಂತೆ ದೇಶ-ವಿದೇಶಗಳಿಂದಲೂ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.

ಮೂರು ಮಾರಿಗುಡಿಗಳ ಪರಿಸರದಲ್ಲಿ ಇನ್ನೂರಕ್ಕೂ ಅಧಿಕ ವಿವಿಧ ಮಾರಾಟ ಮಳಿಗೆಗಳು, ಅಂಗಡಿ – ಸ್ಟಾಲ್‌ಗಳು ತೆರೆದುಕೊಂಡಿದ್ದು ಜಾತ್ರೆಯ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ.

ಮಾರಿಯಮ್ಮ ದೇವಿಗೆ ಅತ್ಯಂತ ಪ್ರಿಯವಾಗಿರುವ ಮಲ್ಲಿಗೆ, ಹಿಂಗಾರ, ಹಣ್ಣು ಕಾಯಿ ಸಮರ್ಪಣೆ ಸಹಿತ ವಿವಿಧ ಅಂಗಡಿಗಳು ಮಂಗಳವಾರ ಬೆಳಗ್ಗಿನಿಂದಲೇ ಭರ್ಜರಿಯಾಗಿ ವ್ಯಾಪಾರ ಪ್ರಾರಂಭಿಸಿವೆ. ನೂರಕ್ಕೂ ಅಧಿಕ ಕೋಳಿ ಮಾರಾಟ ಅಂಗಡಿಗಳೂ ತೆರೆದಿದ್ದು ಹಿಂದಿಗಿಂತಲೂ ಈ ಬಾರಿ ಹೆಚ್ಚಿನ ವಹಿವಾಟಿನ ನಿರೀಕ್ಷೆಯಿದೆ.

ಭಾರೀ ಪೊಲೀಸ್ ಭದ್ರತೆ: ವಿವಿಧೆಡೆಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಮಾಣೆ ನೇತೃತ್ವದಲ್ಲಿ ಕಾಪು ಎಸ್ಸೈ ಅಬ್ದುಲ್ ಖಾದರ್, ಕ್ರೈಂ ಎಸ್ಸೈ ಪುರುಷೋತ್ತಮ್ ಸಹಿತ ನೂರಕ್ಕೂ ಅಧಿಕ ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಮಾರಿಗುಡಿಗಳ ಆಡಳಿತ ಮಂಡಳಿಯು ವಿವಿಧೆಡೆ ಸಿಸಿಟಿವಿ ಕಣ್ಗಾವಲುಗಳನ್ನಿರಿಸಿದೆ.

ಸುಗ್ಗಿ ಮಾರಿಪೂಜೆ ಹಿನ್ನೆಲೆಯಲ್ಲಿ ಮೂರು ಮಾರಿಗುಡಿಗಳ ಪರಿಸರದಲ್ಲಿ ಮತ್ತು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದಕ್ಕಾಗಿ ಪೌರ ಕಾರ್ಮಿಕರು, ಇಬ್ಬರು ಉಸ್ತುವಾರಿಗಳು ಮತ್ತು ಇಬ್ಬರು ಚಾಲಕರ ಸಹಿತವಾಗಿ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಪೌರ ಕಾರ್ಮಿಕರ ತಂಡವು 24X7 ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗರಾಜ ಬಾಬು ತಿಳಿಸಿದ್ದಾರೆ.