ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ರಂಗಾಯಣದಲ್ಲಿ ಕಳೆದ ಆರು ದಿನಗಳಿಂದ ನಡೆದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಭಾನುವಾರ ತೆರೆಬಿದ್ದಿತು.ಬಿಡುಗಡೆ ಆಶದೊಡನೆ ಆರಂಭವಾದ ಈ ಉತ್ಸವದ ಕಡೆಯ ದಿನವಾದ ಭಾನುವಾರ ಅನೇಕ ವಿಚಾರ ಗೋಷ್ಠಿಗಳು ನಡೆಯಿತು.ಬಿಡುಗಡೆಯ ಹಾದಿಯಲ್ಲಿ ಜನ ಚಳವಳಿ ಗೋಷ್ಠಿಯಲ್ಲಿ ಕಥೆಗಾರ ಡಾ. ಮೊಗಳ್ಳಿ ಗಣೇಶ್ ಅಧ್ಯಕ್ಷತೆವಹಿಸಿದ್ದರು. ಕೇರಿಹಾಡು ನಾಟಕ : ಸಾಮಾಜಿಕ ನ್ಯಾಯಕ್ಕಾಗಿ ರಂಗಚಳವಳಿ ಕುರಿತು ಸಂತೋಷ್ದಿಂಡಗೂರು, ಡಿ.ಎಂ. ನಂದಿನಿ, ಕೆ. ಚಂದ್ರಶೇಖರ್ವಿಷಯ ಮಂಡಿಸಿದರು.ನಂತರ ಚಳವಳಿಗಳ ವರ್ತಮಾನದ ಅಗತ್ಯತೆ, ಆದಿವಾಸಿ ಅಲೆಮಾರಿ ಸಮುದಾಯಗಳ ಬಿಡುಗಡೆಯ ದಾರಿಗಳು, ರಂಗಭೂಮಿ: ಯುವ ಚಿಂತನೆ, ಚಳವಳಿಗಳು - ಅನುಭಾವ ಅನುಸಂಧಾನ ಮುಂತಾದ ವಿಷಯಗಳ ಕುರಿತು ಚಿಂತಕರು ಮತ್ತು ಲೇಖಕರು ವಿಚಾರ ಮಂಥನ ನಡೆಸಿದರು.ಆರು ವೇದಿಕೆಗಳಲ್ಲಿ ನಿತ್ಯ ನಾನಾ ಭಾಷೆಯ ನಾಟಕಗಳು, ವೈವಿಧ್ಯಮಯ ಜಾನಪದ ಕಲಾಪ್ರಕಾರಗಳು, ಚಲನಚಿತ್ರೋತ್ಸವ, ಕರಕುಶಲ ಹಾಗೂ ಪುಸ್ತಕ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನವು ರಂಗಾಸಕ್ತರಿಗೆ ರಸದೌತಣ ನೀಡಿದರು.ವನರಂಗ, ಕಲಾಮಂದಿರ, ಕಿರುರಂಗಮಂದಿರ, ಭೂಮಿಗೀತಾದಲ್ಲಿ ಕನ್ನಡ, ಹಿಂದಿ, ಮಲಿಯಾಳಂ, ತಮಿಳು ಸೇರಿದಂತೆ ಇತರೆ ಭಾಷೆಗಳ 22 ನಾಟಕಗಳು ಪ್ರದರ್ಶನಗೊಂಡವು.ಬಹುರೂಪಿ ನಾಟಕೋತ್ಸವದ ಅಂತಿಮ ದಿನವಾದ ಭಾನುವಾರ ರಂಗಾಯಣದ ಅಂಗಳ ರಂಗಾಸಕ್ತರಿಂದ ತುಂಬಿ ತುಳುಕುತ್ತಿತ್ತು. ರಂಗಾಯಣದ ವನರಂಗದಲ್ಲಿ ಕೆ. ಚಂದ್ರಶೇಖರ ನಿರ್ದೇಶನದ ಕೆ.ಪಿ. ಲಕ್ಷ್ಮಣ ಅವರ ವಿನ್ಯಾಸದ ಕೇರಿ ಹಾಡನ್ನು ಹಾಸನದ ದಿಂಡಿಗನೂರಿನ ಸಾವಿತ್ರಿ ಬಾಪುಲೆ ಸ್ತ್ರೀಶಕ್ತಿ ತಂಡದ ಸದಸ್ಯರು ಪ್ರಸ್ತುತಪಡಿಸಿದರು.ಕಿರುರಂಗ ಮಂದಿರದಲ್ಲಿ ಎಚ್.ಎಸ್. ಉಮೇಶ್ನಿರ್ದೇಶನದ, ಡಾ.ನ. ರತ್ನ ರಚನೆಯ ಅಯಾನ್ಶಾಂತಿ ಕುಟೀರ ನಾಟಕವನ್ನು ಸಮತೆಂತೋ ತಂಡದವರು ಪ್ರಸ್ತುತಪಡಿಸಿದರು. ಕಲಾಮಂದಿರದಲ್ಲಿ ಗಣೇಶ್ಮಂದಾರ್ತಿ ಸಂಗೀತ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಸತೀಶ್ತಿಪಟೂರು ರಚನೆಯ ಮೈ ಫ್ಯಾಮಿಲಿ ನಾಟಕವನ್ನು ರಂಗಾಯಣದ ಕಲಾವಿದರು ಪ್ರದರ್ಶಿಸಿದರು.ಕಿಂದರಿಜೋಗಿ ಆವರಣದಲ್ಲಿ ಉಡುಪಿಯ ನವೋದಯ ಸಾಂಸ್ಕೃತಿಕ ಕಲಾ ಮೇಳದವರು ತುಳು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು. ನಂತರ ಶಿವಮೊಗ್ಗದ ಶೋಭಾ ಮತ್ತು ತಂಡದವರು ಲಂಬಾಣಿ ನೃತ್ಯ ಪ್ರದರ್ಶಿಸಿದ್ದು ಆಕರ್ಷಕವಾಗಿತ್ತು.