ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ವಿದ್ಯಾರ್ಥಿಗಳ ಸಾಧನೆಯ ಹಿಂದೆ ಪೋಷಕರು ಮತ್ತು ಅಧ್ಯಾಪಕರ ಶ್ರಮವಿದೆ. ಇಂದಿನ ಪುರಸ್ಕಾರ ಮುಂದಿನ ನಿಮ್ಮ ಸಾಧನೆಗೆ ಪ್ರೇರಣೆಯಾಗಲಿ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಹೇಳಿದರು.ನಗರದ ಶ್ರೀಸಿದ್ಧಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಪದವಿ ಕಾಲೇಜು ಅಲುಮಿನಿ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ ಮತ್ತು ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರೆ, ವಿದ್ಯಾರ್ಥಿಗಳ ಶ್ರಮದ ಜೊತೆಗೆ ಬೋಧಕರು ಹಾಗೂ ಪೋಷಕರ ಪ್ರೋತ್ಸಾಹ ಸಹ ಮುಖ್ಯವಾಗಿದೆ ಎಂದರು.ಶ್ರೀಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಅಲುಮಿನಿ ಅಸೋಸಿಯೇಷನ್‌ನಲ್ಲಿ, ಸುಮಾರು 18 ಸಾವಿರ ಜನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರನ್ನು ಸಂಪರ್ಕಿಸಿ ಇಂತಹ ಕಾರ್ಯಕ್ರಮ ಮಾಡುವುದರಿಂದ ಹೊಸ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯ ಶ್ರೀಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಅಲುಮಿನಿ ಬಳಗ ದೇಶ, ವಿದೇಶಗಳಲ್ಲಿ ಇದೆ. ಮುಂದಿನ ಮೇ ನಲ್ಲಿ ದುಬೈನಲ್ಲಿ ಎಸ್.ಐ.ಟಿ. ಅಲುಮಿನಿ ಸಭೆ ಇದೆ. ಕಳೆದ ವರ್ಷ ನ್ಯೂಜರ್ಸಿಯಲ್ಲಿ ನಡೆದಿತ್ತು. ಅದೇ ರೀತಿ ಪದವಿ ಕಾಲೇಜುಗಳ ಪ್ರಾಂಶುಪಾಲರು, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಉದ್ಯೋಗ ಇಲ್ಲವೇ, ಕಾರ್ಯ ನಿಮಿತ್ತ ನೆಲೆಸಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಂದ ವಿಶೇಷ ಉಪನ್ಯಾಸ, ಕೌಶಲ್ಯ ತರಬೇತಿ ಕೊಡಿಸುವ ಮೂಲಕ ಮಕ್ಕಳಲ್ಲಿ ಹೆಚ್ಚಿನ ಸಾಧನೆಗೆ ಸ್ಫೂರ್ತಿ ತುಂಬಬೇಕೆಂದು ಡಾ.ಶಿವಕುಮಾರಯ್ಯ ಸಲಹೆ ನೀಡಿದರು.ಬೆಂಗಳೂರಿನ ಸಿವಿಲ್ ಜಡ್ಜ್ ನಿಶಾರಾಣಿ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದಂತೆ ಮಹಿಳೆಯರಿಗೂ ಸಾಧನೆಗೆ ಅಡ್ಡಿಯಾಗುವಂತಹ ಹಲವರು ಅಡೆತಡೆಗಳಿವೆ. ಹಾಗೆಂದು ಕೈ ಕಟ್ಟಿ ಕುಳಿತುಕೊಳ್ಳುವ ಬದಲು ಅದರ ಪರಿಹಾರದ ಕಡೆಗೆ ನಾವು ಗಮನಹರಿಸಬೇಕಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೂ, ಸಾಮಾನ್ಯ ಶಿಕ್ಷಣದ ವಿದ್ಯಾರ್ಥಿಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇಂಜಿನಿಯರಿಂಗ್ ಓದುವ ಮಕ್ಕಳಿಗೆ ಕಟ್ಟಳೆಗಳು ಕಡಿಮೆ. ಬಿ.ಎ, ಬಿ.ಕಾಂ, ಬಿಎಸ್ಸಿ ಪದವಿ ವಿದ್ಯಾರ್ಥಿಗಳು, ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಡೆತಡೆಗಳು ಹೆಚ್ಚು. ಹಾಗಾಗಿ ಅಲುಮಿನಿಯಂತಹ ಕಾರ್ಯಕ್ರಮಗಳಲ್ಲಿ ಹೆಣ್ಣುಮಕ್ಕಳು ಭಾಗವಹಿಸುವುದು ಕಡಿಮೆ. ಸಿದ್ಧಗಂಗಾ ಸ್ವಾಮೀಜಿಗಳಿಗೆ ಇಡೀ ವಿಶ್ವದಲ್ಲಿಯೇ ಗೌರವವಿದೆ. ಕೆಲ ಹುದ್ದೆಗಳ ಸಂದರ್ಶನಕ್ಕೆ ಹೋದಂತಹ ಸಂದರ್ಭದಲ್ಲಿ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿ ಎಂದಾಗ ನಮ್ಮಿಂದ ಹೆಚ್ಚಿನ ಶಿಸ್ತು, ಸಮಯ ಪ್ರಜ್ಞೆ ಬಯಸುತ್ತಾರೆ. ಹಾಗಾಗಿ ಸಮಯಕ್ಕೆ ಹೆಚ್ಚಿನ ಬೆಲೆ ನೀಡಬೇಕು. ಹಿರಿಯರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು.
ಹಿರಿಯ ವಿದ್ಯಾರ್ಥಿನಿಯರ ಸಂಘದ ಮಾಜಿ ಉಪಾಧ್ಯಕ್ಷೆ ಸಹನ ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿನಿಯರು ಶಾಲಾ, ಕಾಲೇಜು ದಿನಗಳಲ್ಲಿ ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿದರೆ, ಜೀವಿತದ ಕೊನೆಯವರೆಗೂ ಅವರೊಂದಿಗೆ ತಮ್ಮ ಕಷ್ಟ, ಸುಖಗಳನ್ನು ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಲು ಸಾಧ್ಯವಿದೆ. ಓದಿ ದೂರದ ಊರಿನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ, ತಮ್ಮ ಶಾಲಾ ಕಾಲೇಜಿನ ಸಹಪಾಠಿ ಸಿಕ್ಕರೆ ಮರಳುಗಾಡಿನಲ್ಲಿ ನೀರು ಸಿಕ್ಕಂತೆ ಭಾಸವಾಗುತ್ತದೆ. ಅಲುಮಿನಿಯ ಉದ್ದೇಶವೂ ಆದೇ ಆಗಿದೆ.ನಾನು ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ದಕ್ಷಿಣಮೂರ್ತಿ ಮಾತನಾಡಿ, ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಜನರ ನಿರೀಕ್ಷೆ ಇತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಹೆಚ್ಚಿನ ಜನರು ಬರುವಂತೆ ಮಾಡಲಿದ್ದೇವೆ ಎಂದರು.
ವೇದಿಕೆಯಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪದವಿ ಕಾಲೇಜುಗಳ ಸಂಯೋಜನಾಧಿಕಾರಿ ಡಾ.ಡಿ.ಎನ್.ಯೋಗೀಶ್ವರಪ್ಪ, ಅಲುಮಿನಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.2021-22 ಮತ್ತು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರ‍್ಯಾಂಕ್ ವಿಜೇತರನ್ನು ಈ ವೇಳೆ ಗೌರವಿಸಲಾಯತು.