ಜನಿವಾರ ತೆಗೆಸಿದ ಪ್ರಕರಣದ ಹಿಂದೆ ಕೈವಾಡ: ಎಂ.ಜಿ.ಭಟ್

| Published : Apr 24 2025, 12:02 AM IST

ಸಾರಾಂಶ

ಸಿಇಟಿ ಪರಿಕ್ಷೆ ವೇಳೆ ಜನಿವಾರ ತೆಗೆಸಿದ ದುರ್ಘಟನೆ ಹಲವು ಕಡೆ ಆಗಿರುವುದು ಹಿಂದೂ ಧರ್ಮವನ್ನು ಕೆಣಕಿ ನೋಡಿ, ಹಂತಹಂತವಾಗಿ ನಾಶ ಮಾಡಲು ನಡೆಸಿದ ಹೊಂಚು ಎನ್ನುವುದು ಸ್ಪಷ್ಟ.

ಕುಮಟಾ: ಹಿಂದೂ ಸಂಸ್ಕೃತಿ, ಸಂಸ್ಕಾರ ಮುರಿಯಬೇಕು ಎಂಬ ಉದ್ದೇಶದಿಂದ ರಾಜ್ಯದ ಹಲವೆಡೆ ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ ವರ್ತನೆ ಹಿಂದೆ ಯಾವುದೋ ದೊಡ್ಡ ಅಧಿಕಾರಿಯ ಕೈವಾಡವಿದೆ. ಪಶ್ಚಿಮ ಬಂಗಾಳ, ಬಾಂಗ್ಲಾ, ಪಾಕಿಸ್ತಾನದ ಹಿಂದೂಗಳ ಪರಿಸ್ಥಿತಿ ದೇಶದ ಇತರ ಭಾಗದಲ್ಲೂ ಆಗುವವರೆಗೆ ಕಾಯಬೇಕೇ? ನಾವು ಧರ್ಮ ಸಂಸ್ಕೃತಿ ರಕ್ಷಣೆಗೆ ಪ್ರತಿ ಮನೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿಂದೂ ಹೋರಾಟಗಾರ ಎಂ.ಜಿ.ಭಟ್ ಹೇಳಿದರು.

ರಾಜ್ಯದ ವಿವಿಧೆಡೆ ಸಿಇಟಿ ಪರೀಕ್ಷೆ ವೇಳೆ ಜನಿವಾರ, ಓಲೆ, ಮೂಗುತಿ ಮುಂತಾದವನ್ನು ತೆಗೆಸಿದ ಪ್ರಕರಣ ಸಂಬಂಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆಯನ್ನು ಖಂಡಿಸಿ ತಾಲೂಕು ಸೌಧದೆದುರು ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಸಿಇಟಿ ಪರಿಕ್ಷೆ ವೇಳೆ ಜನಿವಾರ ತೆಗೆಸಿದ ದುರ್ಘಟನೆ ಹಲವು ಕಡೆ ಆಗಿರುವುದು ಹಿಂದೂ ಧರ್ಮವನ್ನು ಕೆಣಕಿ ನೋಡಿ, ಹಂತಹಂತವಾಗಿ ನಾಶ ಮಾಡಲು ನಡೆಸಿದ ಹೊಂಚು ಎನ್ನುವುದು ಸ್ಪಷ್ಟ. ಸರ್ಕಾರದ ಈ ಕ್ರಮವನ್ನು ನಮ್ಮ ಪಕ್ಷ ಮತ್ತು ಎಲ್ಲ ಹಿಂದೂಗಳು ವಿರೋಧಿಸುತ್ತಿದ್ದೇವೆ ಎಂದರು.

ಜಿ.ಐ.ಹೆಗಡೆ ಮೂರೂರು ಮಾತನಾಡಿ, ಪರೀಕ್ಷಾರ್ಥಿಗಳ ಜನಿವಾರ ತೆಗೆಸಿ ಮಾನಸಿಕ ದೌರ್ಜನ್ಯ ಎಸಗಲಾಗಿದೆ. ಅಧಿಕಾರಿಗಳ ವರ್ತನೆಯ ಹಿಂದೆ ಸರ್ಕಾರದ ಕೈವಾಡವಿದೆ ಎಂದರು.

ಮುರಳೀಧರ ಪ್ರಭು ಮಾತನಾಡಿ, ಹಿಂದೂಗಳ ಮಾನಬಿಂದುಗಳನ್ನು ಒಂದೊಂದಾಗಿ ಕಳಚುವ ಸರ್ಕಾರದ ನಿಲುವನ್ನು ವಿರೋಧಿಸಿ, ಜನಿವಾರಕ್ಕಾಗಿ ಪರೀಕ್ಷೆಯನ್ನೇ ಬರೆಯದ ಆ ಬಾಲಕ ನಮಗೆ ಮಾದರಿ ಎಂದರು.

ವೆಂಕಟೇಶ ನಾಯಕ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಸನಾತನ ವಿರೋಧಿ ನೀತಿ ನಡೆಸುತ್ತಿದ್ದು, ಕರ್ನಾಟಕದಲ್ಲಿ ಈ ರೀತಿ ಪ್ರಯೋಗ ಮಾಡುತ್ತಿದ್ದಾರೆ. ಇದನ್ನು ನಾವೆಲ್ಲ ಒಂದಾಗಿ ವಿರೋಧಿಸುತ್ತಿದ್ದೇವೆ ಎಂದರು.

ವೀಣಾ ಭಟ್ಟ ಹೊಲನಗದ್ದೆ ಮಾತನಾಡಿ, ಮಹಿಳೆಯರಿಗೆ ಕಟ್ಟಿದ ತಾಳಿಯನ್ನು ಸ್ವಂತ ಗಂಡನಿಗೂ ತೆಗೆಸುವ ಅಧಿಕಾರ ಇಲ್ಲ ಎಂದರು.

ಎನ್.ಎಸ್.ಹೆಗಡೆ ಕರ್ಕಿ, ಶಿವಾನಂದ ಹೆಗಡೆ ಕಡತೋಕ, ಎನ್.ಆರ್ ಮುಕ್ರಿ, ಮಂಜುನಾಥ ಭಟ್ಟ ಸುವರ್ಣಗದ್ದೆ ಮಾತನಾಡಿದರು. ಅರುಣ ಹೆಗಡೆ ಮನವಿ ವಾಚಿಸಿದರು.

ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ ಅಶೋಕ ಭಟ್, ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳು ಪ್ರತಿಭಟನಾರ್ಥ ಘೋಷಣೆ ಕೂಗಿದರು.