ರಾಜ್ಯೋತ್ಸವ ಪ್ರಶಸ್ತಿಗೆ ತೆರೆಮರೆಯ ಪ್ರಯತ್ನ ಶುರು!

| Published : Oct 08 2023, 12:02 AM IST

ರಾಜ್ಯೋತ್ಸವ ಪ್ರಶಸ್ತಿಗೆ ತೆರೆಮರೆಯ ಪ್ರಯತ್ನ ಶುರು!
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಎಲೆಮರೆಯ ಕಾಯಿಯಂತೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಅಗತ್ಯವಿದೆ.
ಕೆ.ಎಂ. ಮಂಜುನಾಥ್ ಕನ್ನಡಪ್ರಭ ವಾರ್ತೆ ಬಳ್ಳಾರಿ ನಾಡು- ನುಡಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಮಹನೀಯರಿಗೆ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ತೆರೆಮರೆಯ ಪ್ರಯತ್ನ ಶುರುವಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯಿಂದ ಈಗಾಗಲೇ 15ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, ಪ್ರಶಸ್ತಿ ಗಿಟ್ಟಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟವರು ರಾಜಕೀಯ ನಾಯಕರ ಮನೆಯ ಕದ ತಟ್ಟುತ್ತಿದ್ದರೆ, ಮತ್ತೆ ಕೆಲವರು ತಮ್ಮದೇ ಜಾತಿ ನಾಯಕರನ್ನು ಕಟ್ಟಿಕೊಂಡು ಬೆಂಗಳೂರಿಗೆ ತೆರಳಿ ಲಾಬಿ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕರು ಸಹ ಸೇವಾಸಿಂಧು ಫೋರ್ಟಲ್‌ನಲ್ಲಿ ಸಾಧಕರ ಹೆಸರನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆಯಾದರೂ ಅರ್ಜಿ ಸಲ್ಲಿಕೆಗಿಂತ ಪ್ರಭಾವಿ ನಾಯಕರ ಸಂಪರ್ಕದಿಂದ ಮಾತ್ರ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದರಿತ ಕೆಲವರು ಪರಿಚಿತರೊಂದಿಗೆ ಪ್ರಶಸ್ತಿಗಾಗಿ ಹೋರಾಟ ಆರಂಭಿಸಿದ್ದಾರೆ. ಬಳ್ಳಾರಿಗೆ ಪ್ರಾಶಸ್ತ್ಯ ಸಿಗಲಿ: ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ಕಳೆದ ವರ್ಷ ಬಳ್ಳಾರಿ ಜಿಲ್ಲೆಯ ಸಾಧಕರನ್ನು ಹೆಚ್ಚು ಪರಿಗಣಿಸಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಜಿಲ್ಲೆಯಲ್ಲಿ ಸಾಕಷ್ಟು ಜನ ಹಿರಿಯ ಸಾಧಕರಿದ್ದಾಗ್ಯೂ ಒಬ್ಬರಿಗೆ ಮಾತ್ರ ಪ್ರಶಸ್ತಿಯ ಅವಕಾಶ ಸಿಕ್ಕಿತು. ಆರೇಳು ದಶಕಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆಯಲ್ಲಿದ್ದವರನ್ನು ಪರಿಗಣಿಸಿದ್ದರೆ ಪ್ರಶಸ್ತಿಯ ಮೂಲ ಆಶಯ ಈಡೇರುತ್ತಿತ್ತು. ಆದರೆ, ಪ್ರಶಸ್ತಿ ಆಯ್ಕೆ ವೇಳೆ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಲಾಯಿತು ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದರಲ್ಲದೆ, ದೊಡ್ಡ ಮಟ್ಟದಲ್ಲಿ ಪರಿಚಯ ಇದ್ದರಷ್ಟೇ ಪ್ರಶಸ್ತಿ ಸಿಗಲು ಸಾಧ್ಯ ಎಂಬ ಅಸಮಾಧಾನ ಹೊರ ಹಾಕಿದ್ದರು. ಈ ಬಾರಿಯೂ ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ಜಿಲ್ಲೆಗೆ ನ್ಯಾಯ ಸಿಗುತ್ತದೆಯೇ ಎಂಬ ಗುಮಾನಿ ಅನೇಕ ಸಾಧಕರದ್ದು. ರಾಜಕೀಯ ನಾಯಕರ ಸಂಪರ್ಕ ಇರುವವರು ಮಾತ್ರ ಪ್ರಶಸ್ತಿಗೆ ಪ್ರಯತ್ನಿಸುತ್ತಾರೆ. ಆದರೆ, ಯಾರದೇ ಗೊತ್ತು ಗುರುತು ಇಲ್ಲದವರ ಪರಿಸ್ಥಿತಿ ಹೇಗೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅರ್ಜಿ ಹಾಕದವರನ್ನು ಪರಿಗಣಿಸಬೇಕು: ಜಾನಪದ, ಕೃಷಿ, ಸಮಾಜಸೇವೆ, ಬಯಲಾಟ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದ ಮಹನೀಯರು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿದ್ದಾರೆ. ಆದರೆ, ಅನೇಕರು ಪ್ರಶಸ್ತಿಗೆ ಅರ್ಜಿ ಹಾಕುವ ಜಾಯಮಾನ ರೂಢಿಸಿಕೊಂಡಿಲ್ಲ. ಪ್ರಶಸ್ತಿಗೇಕೆ ಅರ್ಜಿ ಹಾಕಬೇಕು? ಸರ್ಕಾರವೇ ಗುರುತಿಸಿ ನೀಡಿದರೆ ನೀಡಲಿ; ಇಲ್ಲದಿದ್ದರೆ ಬೇಡ ಎಂಬ ತೀರ್ಮಾನಕ್ಕೆ ಬಂದವರೂ ಇದ್ದಾರೆ. ಪ್ರಶಸ್ತಿಗೆ ಅರ್ಹರಿದ್ದವರೂ ಅನೇಕರು ಅರ್ಜಿಗಳನ್ನು ಸಲ್ಲಿಸಲಿದ್ದು, ಇಂತಹ ತೆರೆಮರೆಯ ಸಾಧಕರನ್ನು ಗುರುತಿಸುವ ಕೆಲಸವಾಗಬೇಕಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಎಲೆಮರೆಯ ಕಾಯಿಯಂತೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಅಗತ್ಯವಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಈಗಾಗಲೇ 15ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅ.೧೫ರ ವರೆಗೆ ಸಮಯ ಇರುವುದರಿಂದ ಮತ್ತಷ್ಟೂ ಅರ್ಜಿಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಹೊನ್ನೂರಪ್ಪ.