ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ವಿಶ್ವಕರ್ಮ ಜನಾಂಗದಲ್ಲಿ ಜನಿಸಿರುವುದು ನನ್ನ ಪುಣ್ಯ. ರಾಮ ಮೂರ್ತಿಯ ನಿರ್ಮಾಣಕ್ಕಾಗಿಯೇ ನನ್ನ ಜನನವಾಯಿತೇನೋ ಎಂದು ಅನ್ನಿಸುತ್ತಿದೆ. ಕೋಟ್ಯಂತರ ಜನರ ಪ್ರೀತಿ, ಆಶೀರ್ವಾದ, ಪ್ರೋತ್ಸಾಹದಿಂದ ಧನ್ಯನಾಗಿದ್ದೇನೆ. ದೇವಶಿಲ್ಪಿ ವಿಶ್ವಕರ್ಮರ ಆಶೀರ್ವಾದದಿಂದಲೇ ಇದು ಸಾಧ್ಯವಾಗಿದೆ ಎಂದು ಅಯೋಧ್ಯೆಯ ಶ್ರೀ ರಾಮಲಲ್ಲಾ ವಿಗ್ರಹ ನಿರ್ಮಾಣದ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದರು.ಮಂಗಳೂರು ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ಶನಿವಾರ ಆಯೋಜಿಸಲಾದ ‘ಸಮರ್ಪಣಂ ಕಲೋತ್ಸವ 2024’ ಕಾರ್ಯಕ್ರಮದಲ್ಲಿ ‘ವಿಶ್ವಕರ್ಮ ಕುಲತಿಲಕ’ ಬಿರುದು, ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ನಮ್ಮ ಮಕ್ಕಳು ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯವಿದೆ. ನನಗೆ ಸಿಕ್ಕಿದ ಅವಕಾಶ ಎಲ್ಲ ಮಕ್ಕಳಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಮಕ್ಕಳು ಕಲೆಯನ್ನು ಪ್ರೀತಿಸಿ ಕಲಿಯುವಂತೆ ಹಿರಿಯರಾದ ನಾವು ಪ್ರೇರೇಪಿಸಬೇಕು. ಮಕ್ಕಳಿಗೆ ಕುಲಕಸುಬು ಕಲಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು.ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನದಲ್ಲಿ, ಕಲಾಜಗತ್ತಿನಲ್ಲಿ ಅರುಣನ ಉದಯ ಆಗಿದೆ. ಐನೂರು ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಬಾಲರಾಮನ ಪ್ರತಿಷ್ಠೆ ಆಗಿದೆ ಎಂದಾದರೆ ಅದಕ್ಕೆ ಅರುಣ್ ಯೋಗಿರಾಜ್ ಕೊಡುಗೆ ಅಪಾರವಾದುದು. ಮುಂದಿನ ದಿನಗಳಲ್ಲಿ ಮಥುರಾದಲ್ಲಿ ಬಾಲಮುರಳೀ ಕೃಷ್ಣನ ವಿಗ್ರಹ ನಿರ್ಮಾಣವೂ ಅವರಿಂದಾಗಲಿ ಎಂದು ಹಾರೈಸಿದರು.
ಶಿಲ್ಪಗುರು ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ ಅವರು ಶುಭಾಶಂಸನೆ ಮಾಡಿದರು. ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿಯವರು ಪರಿಷತ್‌ನ ಚುಟವಟಿಕೆಗಳ ವರದಿ ವಾಚಿಸಿದರು.ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ ಆಚಾರ್ಯ, ಬೆಂಗಳೂರಿನ ಆರ್ ಅಂಡ್ ಡಿ ಸೆಂಟರ್‌ನ ವಿಜ್ಞಾನಿ ಡಾ. ಜಿ.ಕೆ. ಆಚಾರ್ಯ, ಅವಿಭಜಿತ ದ.ಕ. ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಉದ್ಯಮಿ ಪ್ರಜ್ವಲ್ ಆಚಾರ್ಯ, ವಿದುಷಿ ಶಾರದಾಮಣಿ ಶೇಖರ್, ಪರಿಷತ್ ಗೌರವಾಧ್ಯಕ್ಷ ಪಿ.ಎನ್. ಆಚಾರ್ಯ, ಗೌರವ ಸಲಹೆಗಾರ ಅಲೆವೂರು ಯೋಗೀಶ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ, ಎಸ್.ಕೆ.ಜಿ. ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಇದ್ದರು.ಪರಿಷತ್ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ಪ್ರಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ ಸ್ವಾಗತಿಸಿದರು. ವಿದ್ವಾನ್ ಎನ್.ಆರ್. ದಾಮೋದರ ಶರ್ಮಾ ಬಾರ್ಕೂರು ನಿರೂಪಿಸಿದರು.ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಟೆಂಪಲ್ ಸ್ಕ್ವೇರ್ ವೃತ್ತದಿಂದ ರಥ ಬೀದಿಯ ಮೂಲಕ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಯಕ್ಷ-ಕಾವ್ಯ-ನೃತ್ಯಾಭಿವಂದನೆ ನೆರವೇರಿತು. ಹಿರಿಯ ಕಲಾಸಾಧಕರಿಗೆ ಸನ್ಮಾನ, ಪಿ.ಎನ್. ಆಚಾರ್ಯ ವಿಶ್ವಕರ್ಮ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜದ ಕಲಾವಿದರು, ಶಿಲ್ಪಿಗಳು, ಕುಶಲಕರ್ಮಿಗಳಿಂದ ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.