ಸಾರಾಂಶ
ಜಿ. ರವಿಕುಮಾರ್ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಬೆಳಗನಹಳ್ಳಿಯ ಅಂಗನವಾಡಿಗೆ ಇಪ್ಪತ್ತು ಮಕ್ಕಳು ದಾಖಲಾಗಿದ್ದರೂ ಸಹ ಕಳೆದ ಒಂದು ವಾರದಿಂದ ಬರುತ್ತಿಲ್ಲ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಪ್ರಾಣ ಭಯದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೌದು ಎಚ್.ಡಿ. ಕೋಟೆ ತಾಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಕಾರಣ ಈ ಈ ಪರಿಸ್ಥಿತಿ ಎದುರಾಗಿದೆ.ಕಟ್ಟಡದ ಮೇಲ್ಚಾವಣಿಯಿಂದ ಗಾರೆಯ ಚಕ್ಕೆಗಳು ಬೀಳುತ್ತಿರುವುದರಿಂದ ಪೋಷಕರು ಭಯಭೀತಿಗೊಂಡು ಮಕ್ಕಳನ್ನು ಒಂದು ವಾರದಿಂದ ಅಂಗನವಾಡಿಗೆ ಕಳುಹಿಸುತ್ತಿಲ್ಲ. ಅಂಗನವಾಡಿ ಭಣಗುಡುತ್ತಿದೆ. ಕಳೆದ ಕೆಲ ದಿನಗಳಿಂದ ಅಪಾರ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಮತ್ತು ಅಂಗನವಾಡಿ ಕಟ್ಟಡ ಶಿಥಿಲಗೊಂಡಿದ್ದರಿಂದ ಕಟ್ಟಡದ ಮೇಲ್ಛಾವಣಿ ಚಕ್ಕೆಯ ರೂಪದಲ್ಲಿ ಪ್ರತಿದಿನ ಕುಸಿಯುತ್ತಿದೆ.ಕಳೆದ ನಾಲ್ಕು ದಿನಗಳ ಹಿಂದೆ ಅಂಗನವಾಡಿ ಸಹಾಯಕಿಯ ತಲೆಯ ಮೇಲೆಯೂ ಸಹ ಮೇಲ್ಚಾವಣಿಯ ಗಾರೆ ಚಕ್ಕೆ ಬಿದ್ದಿದ್ದಾಗಿ ಅಂಗನವಾಡಿ ಸಹಾಯಕಿ ರಮ್ಯಶ್ರಿ ತಿಳಿಸಿದರು.ಈ ಸಂಬಂದ ಅಂಗನವಾಡಿ ಮೇಲ್ವಿಚಾರಕಿ ಗಾಯತ್ರಿ ಅವರಿಗೆ ಮಾಹಿತಿಯನ್ನು ನಾಲ್ಕು ದಿನದ ಹಿಂದೆಯೇ ತಿಳಿಸಲಾಗಿದ್ದು, 15 ದಿನಗಳ ರಜೆಯಲ್ಲಿ ತೆರಳಿದ್ದು, ಮೇಲಿನ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಅವರು ಮಾಹಿತಿ ನೀಡಿದ್ದು, ಇದುವರೆಗೂ ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಯಾರೂ ಆಗಮಿಸಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಪ್ರೇಮ ತಿಳಿಸಿದ್ದಾರೆ.ಕಳೆದ ಒಂದು ವಾರದಿಂದ ಈ ರೀತಿ ಘಟನೆ ನಡೆದದ್ದು ನನ್ನ ಗಮನಕ್ಕೆ ಬಂದ ಹಿನ್ನೆಲೆ, ನಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೂ ವಿಷಯ ತಿಳಿಸಲಾಯಿತು. ತಕ್ಷಣ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಆಗಿರುವ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಗ್ರಾಮದ ಗ್ರಾಪಂ ಸದಸ್ಯೆ ಶಶಿರೇಖಾ ತಿಳಿಸಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಾತನಾಡಿ, ಬೆಳಗನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ದುರಸ್ತಿಗೆ 2 ರಿಂದ 3 ಲಕ್ಷ ರು. ಗಳ ವೆಚ್ಚ ತಗಲುತ್ತದೆ, ನಮ್ಮ ಪಂಚಾಯಿತಿ ವತಿಯಿಂದ ಕೇವಲ ರು.50 ಸಾವಿರ ಮಾತ್ರ ನೀಡಲು ಅವಕಾಶವಿದೆ, ಉಳಿದ ಹಣವನ್ನು ಸಂಬಂಧಪಟ್ಟ ಮಾತೃ ಇಲಾಖೆ ನೀಡಿದರೆ ದುರಸ್ತಿ ಮಾಡಬಹುದು ಎಂದು ಹೇಳಿದ್ದಾರೆ.ಗ್ರಾಮದ ಮುಖಂಡ ಭೈರೇಗೌಡ ಮಾತನಾಡಿ, ಅಂಗನವಾಡಿ ಕಟ್ಟಡದ ಮಾಹಿತಿ ನೀಡಲು ಸಿಡಿಪಿಒ ಅವರಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ, ಆದ್ದರಿಂದ ಕಚೇರಿಗೆ ತೆರಳಿ ಮಾಹಿತಿ ನೀಡಲು ತೆರಳಿದಾಗಲೂ ಸಹ ಸಿಡಿಪಿಓ ಆಗಲಿ, ಸಂಬಂಧಪಟ್ಟ ಮೇಲ್ವಿಚಾರಕರಾಗಲಿ ಇರಲಿಲ್ಲ, ಮೇಲ್ವಿಚಾರಕಿ ರಜೆಯಲ್ಲಿ ತೆರಳಿದ್ದು, ಸಿಡಿಪಿಓ ಅವರು ತರಬೇತಿಗೆ ತೆರಳಿದ್ದಾರೆ ಎಂದು ಕಾರಣ ಹೇಳುತ್ತಾರೆ ಎಂದರು.ದೂರವಾಣಿ ಸಂಪರ್ಕದಲ್ಲಿ ಸಿಡಿಪಿಒ ದೀಪಾ ಮಾತನಾಡಿ ಕಟ್ಟಡ ಶಿಥಿಲವಾಗಿರುವುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ, ಸಂಬಂಧಪಟ್ಟ ಮೇಲ್ವಿಚಾರಕಿ ಸುದೀರ್ಘ ರಜೆಯಲ್ಲಿದ್ದಾರೆ, ಅವರು ನನಗೆ ಮಾಹಿತಿ ನೀಡಿಲ್ಲ, ನಾನು ಸಹ ಮೂರು ದಿನಗಳ ತರಬೇತಿಯಲ್ಲಿದ್ದರಿಂದ ಸಹ ಸಂಪರ್ಕಕ್ಕೆ ಸಿಕ್ಕಿರಲಿಲ್ಲ, ಈಗ ಮಾಹಿತಿ ತಿಳಿದಿದ್ದು, ಕಚೇರಿಯಿಂದ ಸಿಬ್ಬಂದಿ ಕಲಕುಹಿಸಲಾಗುವುದು, ಮಕ್ಕಳನ್ನು ಬಾಡಿಗೆ ಕಟ್ಡಡದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಒಟ್ಟಾರೆ ಕಳೆದ ಆರೇಳು ದಿನದಿಂದ ಅಂಗನವಾಡಿ ಮಕ್ಕಳು ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ, ಈ ಕೂಡಲೇ ಇಲಾಖೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.