ಬೆಳಗಾವಿ ಸಿಡಬ್ಲ್ಯುಸಿಗೆ ‘ನವ ಸತ್ಯಾಗ್ರಹ ಬೈಠಕ್‌ ’ ಹೆಸರು

| Published : Dec 25 2024, 12:46 AM IST

ಬೆಳಗಾವಿ ಸಿಡಬ್ಲ್ಯುಸಿಗೆ ‘ನವ ಸತ್ಯಾಗ್ರಹ ಬೈಠಕ್‌ ’ ಹೆಸರು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಣೆ ಸಂದರ್ಭದಲ್ಲೇ ಬೆಳಗಾವಿಯಲ್ಲಿ ಡಿ.26ರಂದು ಆಯೋಜಿಸಲು ಉದ್ದೇಶಿಸಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಗೆ ‘ನವ ಸತ್ಯಾಗ್ರಹ ಬೈಠಕ್‌’ ಎಂದು ಹೆಸರಿಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಣೆ ಸಂದರ್ಭದಲ್ಲೇ ಬೆಳಗಾವಿಯಲ್ಲಿ ಡಿ.26ರಂದು ಆಯೋಜಿಸಲು ಉದ್ದೇಶಿಸಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಗೆ ‘ನವ ಸತ್ಯಾಗ್ರಹ ಬೈಠಕ್‌’ ಎಂದು ಹೆಸರಿಡಲಾಗಿದೆ.

ಸಿಡಬ್ಲ್ಯುಸಿ ಸಭೆಯಲ್ಲಿ ಮುಂದಿನ ವರ್ಷದ ಪಕ್ಷದ ಕಾರ್ಯಯೋಜನೆಗಳು, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ನೀತಿಗಳು ಹಾಗೂ ಡಾ। ಬಿ.ಆರ್‌.ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆ ಕುರಿತು ಗಂಭೀರ ಚರ್ಚೆ ನಡೆಯಲಿದೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಕ್ಷದ ನಾಯಕರಾದ ವೇಣುಗೋಪಾಲ್‌, ಪವನ್‌ ಖೇರಾ, ಜೈರಾಂ ರಮೇಶ್‌ ‘ಬೆಳಗಾವಿಗೆ ಸಿಡಬ್ಲ್ಯುಸಿ ಸಭೆಗೆ ‘ನವ ಸತ್ಯಾಗ್ರಹ ಬೈಠಕ್‌’ ಎಂದು ಹೆಸರಿಡಲಾಗಿದೆ. ಅಂಬೇಡ್ಕರ್‌ ಕುರಿತ ಅಮಿತ್‌ ಶಾ ಹೇಳಿಕೆ ಖಂಡಿಸಿ ಡಿ.26ರಂದು ಅಂಬೇಡ್ಕರ್‌ ಸಮ್ಮಾನ್ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ಡಿ.27ರಂದು ‘ಜೈ ಬಾಪು, ಜೈ ಭೀಮ್‌, ಜೈಭೀಮ್, ಜೈ ಸಂವಿಧಾನ್‌’ ರ್‍ಯಾಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

200 ನಾಯಕರು ಭಾಗಿ: ಈ ಐತಿಹಾಸಿಕ ಸಭೆಯಲ್ಲಿ ಕಾಂಗ್ರೆಸ್‌ನ ಸುಮಾರು 200 ಮಂದಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಇನ್ನು ಡಿ.27ರಂದು ನಡೆಯಲಿರುವ ರ್‍ಯಾಲಿಯಲ್ಲಿ ಕಾಂಗ್ರೆಸ್‌ ಸಂಸದರು, ನಾಯಕರು ಮತ್ತು ಲಕ್ಷಾಂತರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜೊತೆಗೆ ಅಂಬೇಡ್ಕರ್‌ ಕುರಿತ ಹೇಳಿಕೆ ಕುರಿತು ಅಮಿತ್‌ ಶಾ ವಜಾಕ್ಕೆ ಮತ್ತು ಶಾ ಕ್ಷಮಾಪಣೆಗೆ ಸಭೆ ಆಗ್ರಹಿಸಲಿದೆ. ಜೊತೆಗೆ ಈ ವಿಷಯದಲ್ಲಿ ಮುಂದಿನ ಹೋರಾಟದ ಬಗ್ಗೆಯೂ ಸಭೆ ನಿರ್ಧರಿಸಲಿದೆ ಎಂದು ನಾಯಕರು ತಿಳಿಸಿದರು.ಪಕ್ಷ ದೃಷ್ಟಿಯಿಂದ ನೋಡಬೇಡಿ, ಎಲ್ಲರೂ ಪಾಲ್ಗೊಳ್ಳಿ: ಡಿಕೆಶಿ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಪಕ್ಷದ ದೃಷ್ಟಿಯಿಂದ ನೋಡಬೇಡಿ, ಎಲ್ಲರೂ ಪಾಲ್ಗೊಳ್ಳಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಹಿರಂಗ ಆಹ್ವಾನ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಐತಿಹಾಸಿಕ ಕಾರ್ಯಕ್ರಮಕ್ಕೆ ಬೆಳಗಾವಿ ಸಾಕ್ಷಿಯಾಗುತ್ತಿದೆ. ಹೀಗಾಗಿ, ಬೆಳಗಾವಿಯಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಸಾರ್ವಜನಿಕರು ಈ ವೈಭವವನ್ನು ಕಣ್ತುಂಬಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಪಕ್ಷದ ದೃಷ್ಟಿಯಿಂದ ನೋಡಬೇಡಿ. ಕಾಂಗ್ರೆಸ್ ಯಾವುದೇ ಕಾರ್ಯಕ್ರಮ ಮಾಡಿದರೂ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡುವುದಿಲ್ಲ. ದೇಶದ ಇತಿಹಾಸ ಹಾಗೂ ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡುತ್ತದೆ. ಹೀಗಾಗಿ, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡುತ್ತೇನೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ಶಕ್ತಿ ಏನು ಎಂಬುದು ನಮಗೂ ಗೊತ್ತಿದೆ. ನಮಗಿಂತ ಚೆನ್ನಾಗಿ ಬಿಜೆಪಿಯವರಿಗೂ ಗೊತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಎಂದೆನಿಸಿಕೊಂಡವರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಜನರನ್ನು ಕರೆ ತನ್ನಿ ಎಂದು ಹೇಳುವುದಿಲ್ಲ. ನೂರು ಜನರನ್ನು ಕರೆದುಕೊಂಡು ಬಂದರೂ ಸಾಕು ಎಂದರು.

ಕಾರ್ಯಕ್ರಮ ನಡೆಯುವ ಜಾಗಗಳಿಗೆ ಭೇಟಿ ನೀಡಿ ಪೂರ್ವ ಸಿದ್ಧತೆ ಪರಿಶೀಲನೆ ಮಾಡುತ್ತಿದ್ದೇನೆ. ಸಕಾಲದಲ್ಲಿ ಎಲ್ಲಾ ಸಿದ್ಧತೆ ಪೂರ್ಣಗೊಳ್ಳಲಿದೆ. ಡಿ.26ರಿಂದ ಅಧಿಕೃತ ಕಾರ್ಯಕ್ರಮ ಆರಂಭವಾಗಲಿದೆ. 26ರಂದು ಬೆಳಗ್ಗೆ ಕೆಲವು ಸ್ಥಳಗಳಲ್ಲಿ ಉದ್ಘಾಟನಾ ಕಾರ್ಯಕ್ರಮಗಳಿವೆ. 1924ರಲ್ಲಿ ಡಿ.26ರ ಮಧ್ಯಾಹ್ನ 3 ಗಂಟೆಗೆ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಿತ್ತು. ಹೀಗಾಗಿ, ಡಿ.26ರಂದು ಅದೇ ಸಮಯಕ್ಕೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 27ರಂದು ಬೆಳಗ್ಗೆ 10.30ಕ್ಕೆ ಸರ್ಕಾರದ ವತಿಯಿಂದ ಸುವರ್ಣಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಾಗುವುದು. ಅಂದು ಸುವರ್ಣಸೌಧದಲ್ಲಿ ಫೋಟೋ ಸೆಷನ್, ಭೋಜನ ಕೂಟವಿದೆ. 27ರಂದು ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.