ಜಗದೀಶ್‌ ಶೆಟ್ಟರ್‌ಗೆ ರಾಜಕೀಯ ಮರುಜನ್ಮ ನೀಡಿದ ಬೆಳಗಾವಿ!

| Published : Jun 05 2024, 01:30 AM IST / Updated: Jun 05 2024, 10:56 AM IST

ಜಗದೀಶ್‌ ಶೆಟ್ಟರ್‌ಗೆ ರಾಜಕೀಯ ಮರುಜನ್ಮ ನೀಡಿದ ಬೆಳಗಾವಿ!
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದಲ್ಲಿ ಬಿಜೆಪಿ ಟಿಕೆಟ್‌ ಸಿಗಲಿಲ್ಲ ಎಂದು ಕಾಂಗ್ರೆಸ್‌ಗೆ ಹಾರಿ ಎಂಎಲ್‌ಸಿ ಆಗಿ ಮರಳಿ ಬಿಜೆಪಿಗೆ ಬಂದಿದ್ದ ಜಗದೀಶ್‌ ಶೆಟ್ಟರ್‌ಗೆ ಬೆಳಗಾವಿ ಮರುಜನ್ಮ ನೀಡಿದೆ.

  ಬೆಳಗಾವಿ :  ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದಾರೆ. ಈ ಮೂಲಕ ಬೆಳಗಾವಿಯಲ್ಲಿ ಶೆಟ್ಟರ್‌ ರಾಜಕೀಯ ಮರು ಜನ್ಮಪಡೆದಿದ್ದಾರೆ.

ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ (ಬಣಜಿಗ) ಸಮುದಾಯದ ಪ್ರಭಾವಿ ನಾಯಕ ಶೆಟ್ಟರ್‌ ಅವರು 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಟಿಕೆಟ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ನಿಂದಲೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಮಹೇಶ್‌ ಟೆಂಗಿನಕಾಯಿ ವಿರುದ್ಧ ಸೋಲುಂಡಿದ್ದರು. ಇದರಿಂದ ತೀವ್ರ ಆಘಾತಗೊಂಡಿದ್ದ ಅವರನ್ನು ಕಾಂಗ್ರೆಸ್‌ ಪಕ್ಷ ಪರಿಷತ್ತಿಗೆ ಆಯ್ಕೆ ಮಾಡಿ ಕಳುಹಿಸಿತ್ತು.

ಒಂದು ಹಂತದಲ್ಲಿ ಬಿಜೆಪಿ ಬಿಟ್ಟು ಹೋದ ಮೇಲೆ ಶೆಟ್ಟರ್‌ ರಾಜಕೀಯವಾಗಿ ಅತಂತ್ರ ಸ್ಥಿತಿ ಎದುರಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಲೋಕಸಭಾ ಚುನಾವಣೆ ಪೂರ್ವದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶೆಟ್ಟರ್‌ ರನ್ನು ಮತ್ತೆ ಬಿಜೆಪಿಗೆ ಕರೆತಂದು ಕರೆತಂದರು. ಬೆಳಗಾವಿ ಟಿಕೆಟ್‌ ಕೊಡಿಸಿದರು. ಇದೀಗ ಹಾಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ವಿರುದ್ಧ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.